PUCಯಲ್ಲಿ ಟಾಪರ್, ಗೋಬಿ ಮಂಚೂರಿ ಕೋಪಕ್ಕೆ ಅಜ್ಜಿ ಕೊಂದು ಹೊಟೇಲ್ ಸಪ್ಲೈಯರ್ ಆಗಿದ್ದ ಮೊಮ್ಮಗ….

Prasthutha|

►►5 ವರ್ಷದ ಬಳಿಕ ಪ್ರಕರಣ ಭೇದಿಸಿದ ಪೊಲೀಸರು

- Advertisement -

ಬೆಂಗಳೂರು: ಐದು ವರ್ಷಗಳ ಹಿಂದೆ ರಾಜಧಾನಿಯಲ್ಲಿ ಬೆಚ್ಚಿ ಬೀಳಿಸಿದ ಗೋಬಿ ಮಂಚೂರಿ ವಿಷಯದಲ್ಲಿ ನಡೆದಿದ್ದ ವೃದ್ಧೆ ಶಾಂತಕುಮಾರಿ ಕೊಲೆ ಪ್ರಕರಣವನ್ನು  ಕೆಂಗೇರಿ ಪೊಲೀಸರು ಕೊನೆಗೂ ಬೇಧಿಸಿದ್ದಾರೆ.

ಪ್ರಕರಣದ ಸಂಬಂಧ ಕೊಲೆಯಾದ ವೃದ್ಧೆಯ ಮಗಳು, ಮೊಮ್ಮಗ‌ರಾಗಿದ್ದ ತಾಯಿ-ಮಗ ಹಾಗೂ ಮತ್ತೊಬ್ಬ ಸೇರಿ ಮೂವರನ್ನು  ಪೊಲೀಸರು ಬಂಧಿಸಿದ್ದಾರೆ.

- Advertisement -

ಪ್ರಕರಣ ಭೇದಿಸುವ ಮುನ್ನ ಆರೋಪಿಗಳ ಬಂಧನಕ್ಕೆ ಪೊಲೀಸರು ವಿವಿಧ ತಂಡ ರಚಿಸಿ ತನಿಖೆ ನಡೆಸಿದರೂ, ಪ್ರಕರಣದ ಮೂರನೇ ಆರೋಪಿ ಹೊರತುಪಡಿಸಿ ಮುಖ್ಯ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದರು.

ತಾರ್ಕಿಕ ಅಂತ್ಯ ಕಾಣದೆ ದೂಳು ಹಿಡಿದಿದ್ದ ಪ್ರಕರಣವನ್ನು ಮತ್ತೆ ಸವಾಲಾಗಿ ಸ್ವೀಕರಿಸಿ ಕೆಂಗೇರಿ ಠಾಣೆಯ ಇನ್‌ ಸ್ಪೆಕ್ಟರ್ ವಸಂತ್ ನೇತೃತ್ವದ ತಂಡ, ತಾಯಿ ಶಾಂತಕುಮಾರಿ ಕೊಲೆಗೈದ ಆರೋಪದಡಿ ಶಶಿಕಲಾ (46), ಆಕೆಯ ಮಗ ಸಂಜಯ್ (26) ಎಂಬುವರನ್ನು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬಂಧಿಸಿ ನಗರಕ್ಕೆ ಕರೆತಂದು ವಿಚಾರಣೆ ನಡೆಸಿದೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

2016ರಲ್ಲಿ ವೃದ್ಧೆ ಕೊಲೆ:

ಕೆಂಗೇರಿ ಉಪಗ್ರಹ ಬಡಾವಣೆಯ ಮನೆಯೊಂದರಲ್ಲಿ ಹತ್ಯೆಯಾದ 69 ವರ್ಷದ ಶಾಂತಕುಮಾರಿ ಜೊತೆಗೆ ಮಗಳು ಶಶಿಕಲಾ ಹಾಗೂ ಮೊಮ್ಮಗ ಸಂಜಯ್ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಶಿಸ್ತು ಹಾಗೂ ಮಡಿವಂತಿಕೆಯನ್ನು ಶಾಂತಕುಮಾರಿ ಬೆಳೆಸಿಕೊಂಡಿದ್ದರು. ಶಶಿಕಲಾ ಗೃಹಿಣಿಯಾಗಿದ್ದು, ಈಕೆಯ ಪತಿ ಹಲವು ವರ್ಷಗಳ ಹಿಂದೆ ಮೃತರಾಗಿದ್ದರು. ಪುತ್ರ ಸಂಜಯ್ ಖಾಸಗಿ ಕಾಲೇಜಿನಲ್ಲಿ ಏರೊನಾಟಿಕಲ್ ಇಂಜಿನಿಯರ್ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ. ಪ್ರತಿಭಾವಂತನಾಗಿದ್ದ ಈತ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಪಡೆದಿದ್ದ.

ಮಡಿ-ಮೈಲಿಗೆ:

ಓದುವ ವಿಷಯದಲ್ಲಿ ಮುಂದಿದ್ದು ಪ್ರತಿಭಾವಂತನಾಗಿದ್ದ ಸಂಜಯ್ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಮಡಿ-ಮೈಲಿಗೆ ಸಂಪ್ರದಾಯ ಬೆಳೆಸಿಕೊಂಡಿದ್ದ ವೃದ್ಧೆ ಶಾಂತಕುಮಾರಿ ಅದನ್ನು ಪಾಲಿಸುವಂತೆ ಮನೆಯವರ ಮೇಲೆ ಒತ್ತಡ ತರುತ್ತಿದ್ದರು. 2016 ಆಗಸ್ಟ್ ನಲ್ಲಿ ಕಾಲೇಜು ಮುಗಿಸಿ ಸಂಜಯ್, ಮನೆಗೆ ಬಂದು ಗೋಬಿಮಂಜೂರಿ ತಂದುಕೊಟ್ಟಿದ್ದ.

ಇದನ್ನು ಯಾವುದೇ ಕಾರಣಕ್ಕೂ ತಿನ್ನಬಾರದು, ಮನೆಯವರಿಗೂ ಕೊಡಬಾರದು ಎಂದು ಬೈದು ಮೊಮ್ಮಗನ ಮೇಲೆ ಬಿಸಾಕಿದ್ದರು. ಇದರಿಂದ ಆಕ್ರೋಶಗೊಂಡ ಸಂಜಯ್ ಅಡುಗೆ ಮನೆಯಲ್ಲಿದ್ದ ಲಟ್ಟಣಿಗೆ ತಂದು ಅಜ್ಜಿ ಯತ್ತ ಎಸೆದಿದ್ದು ಅದು ಬಲವಾಗಿ ತಲೆಗೆ ತಗುಲಿ ತೀವ್ರ ರಕ್ತಸ್ರಾವವಾಗಿ ಮನೆಯಲ್ಲಿ ಶಾಂತಕುಮಾರಿ ಮೃತಪಟ್ಟಿದ್ದರು.

ಶವ ಬಚ್ಚಿಟ್ಟ ತಾಯಿ-ಮಗ: ತನ್ನ ತಾಯಿಯನ್ನು ಮಗ ಸಂಜಯ್ ಕೊಲೆಗೈದ ವಿಚಾರ ಅರಿತುಕೊಂಡ ಶಶಿಕಲಾ, ಪೊಲೀಸರಿಗೆ ಮಾಹಿತಿ ನೀಡಲು ಮುಂದಾಗಿದ್ದರು. ಪೊಲೀಸರಿಗೆ ತಿಳಿಸಿದರೆ ನಾನು ಜೈಲಿಗೆ ಹೋಗುವೆ. ನಿನ್ನ ಮಗನ ಭವಿಷ್ಯವನ್ನು ನೀನೆ ಹಾಳು ಮಾಡುತ್ತೀಯಾ ಎಂದು ಪೊಲೀಸರಿಗೆ ಹೇಳದಂತೆ ಸಂಜಯ್ ಗೋಗರಿದಿದ್ದ.  ಮಗನ ಮೇಲಿನ ಅತಿಯಾದ ಪ್ರೀತಿಗೆ ಶಶಿಕಲಾ ಒಪ್ಪಿಕೊಂಡಿದ್ದರು. ಮನೆಯಿಂದ ಶವ ಹೊರತೆಗೆಯುವುದು ಅಸಾಧ್ಯವೆಂದು ನಿರ್ಧರಿಸಿ ಸ್ನೇಹಿತ ಕುಂಬಳಗೋಡಿನ ನಿವಾಸಿ ನಂದೀಶ್ ಗೆ ಸಂಜಯ್ ವಿಷಯ ತಿಳಿಸಿ ಮನೆಗೆ ಕರೆಯಿಸಿಕೊಂಡಿದ್ದ. ಮೂವರು ಒಟ್ಟುಗೂಡಿ ಮನೆಯ ಕಬೋರ್ಡ್ ನಲ್ಲಿ ಶವ ಬಚ್ಚಿಟ್ಟಿದ್ದರು.

ವಾಸನೆ ಬರದಿರಲು ಕೆಮಿಕಲ್ಸ್ ಹಾಕಿದ್ದರು. ಬಳಿಕ ಮನೆಯೊಳಗೆ ಗೋಡೆ ಕೊರೆದು ಶವವಿಟ್ಟು ಸಿಮೆಂಟ್ ನಿಂದ ಪ್ಲಾಸ್ಟರಿಂಗ್ ಮಾಡಿ ಬಣ್ಣ ಬಳಿದಿದ್ದರು. ಕೆಲ ತಿಂಗಳ ಬಳಿಕ ಊರಿಗೆ ಹೋಗಿಬರುವುದಾಗಿ ಹೇಳಿ ಮನೆ ಮಾಲೀಕರಿಗೆ ತಿಳಿಸಿ ಪರಾರಿಯಾಗಿದ್ದರು.

ವೃದ್ಧೆ ಕಳೇಬರ ಪತ್ತೆ:

ಆರು ತಿಂಗಳಾದರೂ ಊರಿಗೆ ಹೋಗಿದ್ದ ಅಮ್ಮ-ಮಗ ಮನೆಗೆ ಬಾರದೆ ಅನುಮಾನಗೊಂಡ ಮನೆ ಮಾಲೀಕರು, ಮನೆ ರಿಪೇರಿ ಮಾಡಿಸಲು 2017 ಮೇ. 7 ರಂದು ಮನೆಯೊಳಗೆ ಪ್ರವೇಶಿಸಿದ್ದರು. ಈ ವೇಳೆ ಹೂತು ಹಾಕಿದ್ದ ಗೋಡೆ ಬಳಿ ರಕ್ತಸಿಕ್ತವಾಗಿದ್ದ ಬಿದ್ದಿದ್ದ ಸೀರೆಯನ್ನು ಗಮನಿಸಿದ್ದರು. ಮನೆಯಲ್ಲಿ ವಾಸವಾಗಿದ್ದ ವೃದ್ಧೆಯೂ ಕಾಣದಿದ್ದಾಗ ಸಂಶಯಗೊಂಡು ಕೂಡಲೇ ಆಗಿನ ಇನ್ಸ್ಪೆಕ್ಟರ್ ಗಿರಿರಾಜ್ ಅವರ ಗಮನಕ್ಕೆ ತಂದಿದ್ದರು.

ಸ್ಥಳಕ್ಕೆ ದೌಡಾಯಿಸಿ ಮನೆಯಲ್ಲಿ ಶೋಧಿಸಿದಾಗ ಸಂಜಯ್ ಬಿಟ್ಟುಹೋಗಿದ್ದ ಮೊಬೈಲ್ ಪತ್ತೆಯಾಗಿತ್ತು. ಕರೆ ವಿವರ ಪರಿಶೀಲಿಸಿದಾಗ ನಂದೀಶ್ ಮೊಬೈಲ್ ನಂಬರ್ ತಳಕುಹಾಕಿಕೊಂಡಿತ್ತು.

ಈತನ ಜಾಡು ಹಿಡಿದು ಹೊರಟ ಪೊಲೀಸ್ ತಂಡ, ನಂದೀಶ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ವೃದ್ಧೆಯನ್ನು ಕೊಲೆ ಮಾಡಿ ಶವವನ್ನು ಗೋಡೆಯಲ್ಲಿ ಅವಿತಿಟ್ಟಿರುವ ಸಂಗತಿ ಬಯಲಾಗಿತ್ತು. ಆರೋಪಿ ಹೇಳಿಕೆ ಆಧರಿಸಿ ಗೋಡೆ ಕೊರೆದು ಪರಿಶೀಲಿಸಿದಾಗ ವೃದ್ಧೆಯ ಕಳೇಬರ ಪತ್ತೆಯಾಗಿತ್ತು.

ಹೊಟೇಲ್ ಸಪ್ಲೈಯರ್:

ವೃದ್ಧೆಯ ಕೊಲೆ ನಂತರ ಬಂಧನ ಭೀತಿಯಿಂದ ತಾಯಿ-ಮಗ ಮಾಲೀಕರ ಬಳಿ ಸಂಬಂಧಿಕರಿಗೆ ಹುಷಾರಿಲ್ಲ ಎಂದು ಮನೆ ತೊರೆದಿದ್ದರು. ಆರೋಪಿಗಳು ಹುಟ್ಟೂರಾದ ಶಿವಮೊಗ್ಗದ ಸಾಗರಕ್ಕೆ ತೆರಳಿದ್ದರು. ನಂತರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ತಲೆಮರೆಸಿಕೊಂಡಿದ್ದರು.

ಸ್ಥಳೀಯ ಹೊಟೇಲ್ ನಲ್ಲಿ ಸಂಜಯ್ ಸಪ್ಲೈಯರ್ ಕೆಲಸ ಹಾಗೂ ತಾಯಿ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದರು. ಇತ್ತ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದರೂ ಪ್ರಯೋಜನವಾಗಿರಲಿಲ್ಲ.

ಸಿಕ್ಕಿಬಿದ್ದ ತಾಯಿ-ಮಗ:

ಕಾಲ ಕ್ರಮೇಣ ಕೊಲೆ ಪ್ರಕರಣದ ಕಡತ ದೂಳು ಸೇರಿತ್ತು. ಇತ್ತೀಚೆಗೆ ಇತ್ಯರ್ಥವಾಗದ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಕೆಂಗೇರಿ ಪೊಲೀಸರಿಗೆ ತಾಕೀತು ಮಾಡಲಾಗಿತ್ತು ಎಂದು ಅವರು ತಿಳಿಸಿದರು.

ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಸಿದಾಗ ಸಿಕ್ಕ ಸುಳಿವಿನಿಂದ ಕೊಲ್ಲಾಪುರದಲ್ಲಿ ಅಡಗಿದ್ದ ತಾಯಿ-ಮಗನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp