ಮೀಸಲಾತಿಗೆ ಒತ್ತಾಯ: ನಾಳೆ ಎಸ್ಟಿ ಸಮಾಜದಿಂದ ವಿಧಾನಸೌಧಕ್ಕೆ ಮುತ್ತಿಗೆ

Prasthutha|

ಬೆಂಗಳೂರ: ನಾಯಕ/ವಾಲ್ಮೀಕಿ ಸಮಾಜ 30 ವರ್ಷಗಳಿಂದ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಶೇ.7.5 ಮೀಸಲಾತಿ ನೀಡಬೇಕೆಂದು ಹೋರಾಟ ನಡೆಸುತ್ತಿದ್ದರೂ ನಿರ್ಲಕ್ಷ್ಯ ಮಾಡುತ್ತಿರುವ ಸರ್ಕಾರದ ನಿಲುವು ವಿರೋಧಿಸಿ ಹಾಗೂ ಕೂಡಲೇ ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಕರ್ನಾಟಕದ ನಾಯಕ ಸಮಾಜದ ಸಮಾನ ಮನಸ್ಕರು ಫೆ.17ರಂದು ವಿಧಾನ ಸೌಧ ಚಲೋ ಹಮ್ಮಿಕೊಂಡಿದ್ದಾರೆ.

- Advertisement -

ನಾಳೆ ಬೆಳಗ್ಗೆ 9.30ಕ್ಕೆ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಿಂದ ಹೊರಡಲಿರುವ ಪ್ರತಿಭಟನಕಾರರು ವಿಧಾನ ಸೌಧದ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ನಂತರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟ ಸತ್ಯಾಗ್ರಹ ನಡೆಸಲಿದ್ದಾರೆಂದು ನಾಯಕ ಸಮಾಜದ ಸಮಾನ ಮನಸ್ಕರು ಹಾಗೂ ಕರ್ನಾಟಕ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷ ರಮೇಶ್ ಹಿರೇಜಂಬೂರು ತಿಳಿಸಿದ್ದಾರೆ.

ನ್ಯಾ. ನಾಗಮೋಹನ್ ದಾಸ್ ಆಯೋಗ ಸಮಗ್ರವಾಗಿ ಅಧ್ಯಯನ ನಡೆಸಿ ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ನೀಡುವ ಬಗ್ಗೆ ಸರ್ಕಾರಕ್ಕೆ ವರದಿಯನ್ನೂ ನೀಡಿದೆ. ಆದರೆ ಈ ವರದಿಯನ್ನು ಅನುಷ್ಠಾನಕ್ಕೆ ತರುವಲ್ಲಿ ಸರ್ಕಾರ ಅನಗತ್ಯವಾಗಿ ವಿಳಂಬ ಅನುಸರಿಸುತ್ತಿದೆ. ಹೀಗಾಗಿ ಫೆ.17ರಿಂದ ರಾಜ್ಯದ ಇಡೀ ಪರಿಶಿಷ್ಟ ಪಂಗಡ ಸಮುದಾಯದ ವಿವಿಧ ಸಂಘಟನೆಗಳು ಒಟ್ಟಾಗಿ ನಾಯಕ ಸಮಾಜದ ಸಮಾನ ಮನಸ್ಕರ ತಂಡ ರಚಿಸಿಕೊಂಡು “ವಿಧಾನಸೌಧ ಚಲೋ” ಹೆಸರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿವೆ. ಆ ಮೂಲಕ ನಾಯಕ ಸಮಾಜ ತನ್ನ ಒಗ್ಗಟ್ಟು ಪ್ರದರ್ಶಿಸುತ್ತಿದೆ ಎಂದು ರಮೇಶ್ ಹಿರೇಜಂಬೂರು ಹೇಳಿದ್ದಾರೆ.

- Advertisement -

ಇಡೀ ರಾಜ್ಯ ಅಥವಾ ಭಾರತದ ಇತಿಹಾಸದಲ್ಲಿ ಒಬ್ಬರು ನ್ಯಾಯಮೂರ್ತಿ ನೀಡಿದ ವರದಿಯನ್ನು ಪರಿಶೀಲಿಸಲು ಇನ್ನೊಬ್ಬ ನ್ಯಾಯಮೂರ್ತಿಯನ್ನು ಸರ್ಕಾರ ನೇಮಕ ಮಾಡಿದ್ದು ಇಲ್ಲವೇ ಇಲ್ಲ. ಆದರೆ ಕರ್ನಾಟಕ ಸರ್ಕಾರ ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡಿದೆ. ತ್ರಿಸದಸ್ಯ ಸಮಿತಿಗೆ ನ್ಯಾ. ನಾಗಮೋಹನ್ ದಾಸ್ ವರದಿಯನ್ನು ಪರಿಶೀಲನೆ ಮಾಡಲು ನೀಡಿ ಸಂವಿಧಾನಕ್ಕೆ ಅಪಚಾರ ಎಸಗಿದೆ. ಇದನ್ನು ರಾಜ್ಯದ ಇಡೀ ಪರಿಶಿಷ್ಟ ಪಂಗಡದ 53 ಜಾತಿಗಳ ಜನರೂ ಒಟ್ಟಾಗಿ ತೀವ್ರವಾಗಿ ಖಂಡಿಸುತ್ತೇವೆ ಎಂದಿದ್ದಾರೆ.

ನಕಲಿ ಜಾತಿ ಪ್ರಮಾಣ ಪತ್ರದ ಹಾವಳಿ ತಪ್ಪಿಸಲು ಆಗ್ರಹ:

ಇಡೀ ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿಗೆ ಕೆಲವು ಅಧಿಕಾರಿಗಳು, ಜನಪ್ರತಿನಿಧಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆ. ನಮ್ಮ ಸಮುದಾಯ ಯುವಕರನ್ನು ಅಮಾನುಷವಾಗಿ ಕೊಲೆಗಳನ್ನು ಮಾಡಿಸಿ, ಆ ಪ್ರಕರಣಗಳನ್ನೇ ಮುಚ್ಚಿಹಾಕಿಸುತ್ತಿದ್ದಾರೆ ಗಂಬೀರ ಆರೋಪ ಮಾಡಿರುವ ನಾಯಕ ಸಮಾಜದ ಸಮಾನ ಮನಸ್ಕರ ತಂಡ, ಇದರಿಂದ ಇರುವ ಶೇ.3ರಷ್ಟು ಮೀಸಲಾತಿಯನ್ನೂ ಪರಿಶಿಷ್ಟ ಪಂಗಡದ ಸಮುದಾಯ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಕ್ಷಣ ಈ ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿಗೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಇದರ ಜೊತೆಗೆ ನಮ್ಮ ಸಮುದಾಯ ನಾಯಕ ಸಮಾಜದ ತಳವಾರ, ಪರಿವಾರ ಜಾತಿಗಳನ್ನು ಎಸ್ಟಿಗೆ ಸೇರಿಸಿ ಎಂದು ಆಗ್ರಹಿಸಿದರೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮಾನದಂಡಗಳನ್ನು ಬಿಟ್ಟು ತಳವಾರ ವೃತ್ತಿಯಲ್ಲಿದ್ದ ಎಲ್ಲ ತಳವಾರ, ಪರಿವಾರ ಸಮುದಾಯವನ್ನೂ ಎಸ್ಟಿ ವರ್ಗಕ್ಕೆ ಸೇರಿಸಿದೆ ಎಂಬ ಗೊಂದಲ ಸೃಷ್ಟಿಯಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟತೆ ನೀಡಬೇಕು ಎಂದು ಇಡೀ ರಾಜ್ಯದ ವಿವಿದ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಸಮುದಾಯಗಳಿಗೆ ಸರ್ಕಾರದಿಂದ ನೀಡಬೇಕಿದ್ದ SCP/TSP ಅನುದಾನವನ್ನು ಶೇ.70 ರಷ್ಟು ಕಡಿತಗೊಳಿಸಿರುವುದು ತೀರಾ ಖಂಡನೀಯ. ಸಮಾನತೆಯ ಬಗ್ಗೆ ಮಾತನಾಡುವ ಸರ್ಕಾರ ತಳ ಸಮುದಾಯಗಳನ್ನು ಸದ್ದಿಲ್ಲದೆ ತುಳಿಯುವ ಕೆಲಸ ಮಾಡುತ್ತಿದೆ. ಆದ್ದರಿಂದ ಸರ್ಕಾರದ ಈ ನೀತಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಹಾಗೆಯೇ ಹಿಂದೆ ಖಡಿತಗೊಳಿಸಿರವಾಲ್ಮೀಕಿಯವರುರಷ್ಟು ಅನುದಾನವನ್ನೂ ಸೇರಿಸಿ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್ ಮಂಡನೆ ಮಾಡಬೇಕು ಎಂದು ಸಮಾನ ಮನಸ್ಕರು ಆಗ್ರಹಿಸಿದ್ದಾರೆ.

ಬ್ಯಾಕ್ ಲಾಗ್ ಹುದ್ದೆ ವಿಚಾರದಲ್ಲಿ ರಾಜ್ಯ ಸರ್ಕಾರ ಪದೇ ಪದೇ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಅನ್ಯಾಯ ಮಾಡುತ್ತಲೇ ಬರ್ತಿದೆ. ತಕ್ಷಣ ಸರ್ಕಾರ ಎಸ್ಸಿ, ಎಸ್ಟಿ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ನಾಯಕ ಸಮಾಜದ ಸಮಾನ ಮನಸ್ಕರು ಒತ್ತಾಯಿಸುತ್ತಿದ್ದೇವೆ ಎಂದು ರಮೇಶ್ ಹಿರೇಜಂಬೂರು ಹೇಳಿದ್ದಾರೆ.

ಹಾಗೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಾಯಕ/ವಾಲ್ಮೀಕಿ ಸಮುದಾಯದ ಮತ್ತೊಂದು ಬೇಡಿಕೆಯನ್ನು ಈಡೇರಿಸಲೇಬೇಕು. ಆದಿಕವಿ ಮಹರ್ಷಿ ವಾಲ್ಮೀಕಿಯವರು ಪರಿಚಯಿಸಿದ ರಾಮನಿಗೆ ಅಯೋದ್ಯೆಯಲ್ಲಿ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಆದರೆ ರಾಮನನ್ನು ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿಯ ಬಗ್ಗೆ ಮಾತ್ರ ಎಲ್ಲೂ ಪ್ರಸ್ತಾಪಿಸುವುದೇ ಇಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಯೋದ್ಯೆಯಲ್ಲಿರುವ ರಾಮಮಂದಿರದ ಎದುರೇ ಮಹರ್ಷಿ ವಾಲ್ಮೀಕಿಯ ಬೃಹತ್ ಪ್ರತಿಮೆ ನಿರ್ಮಾಣ ಮಾಡಲೇಬೇಕೆಂದು ನಾಯಕ ಸಮಾಜದ ಸಮಾನ ಮನಸ್ಕರು ಆಗ್ರಹಿಸುತ್ತಿದ್ದೇವೆ ಎಂದಿದ್ದಾರೆ.

ಆದಿಕವಿ, ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣವಿಲ್ಲದೆ ಸಾಹಿತ್ಯವೂ ಇಲ್ಲ, ಶಿಕ್ಷಣವೂ ಇಲ್ಲ. ಹೀಗಿರುವಾಗ ರಾಜ್ಯದ ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ಆದಿ ಕವಿ, ಮಹರ್ಷಿ ವಾಲ್ಮೀಕಿ ಹೆಸರಿಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ. ಈ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ “ನಾಯಕ ಸಮಾಜದ ಸಮಾನ ಮನಸ್ಕರು ಫೆ.17 ರಂದು ಬೆಳಗ್ಗೆ 9.30ಗಂಟೆಗೆ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಿಂದ ವಿಧಾನ ಸೌಧದ ವರೆಗೆ ವಿಧಾನ ಸೌಧ ಚಲೋ” ನಡೆಸುತ್ತಿದ್ದೇವೆ. ನಂತರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಲಾಗುವುದು ಎಂದು ಭರತ್ ರಾಜ್ ಸೇರಿದಂತೆ ಇಡೀ ನಾಯಕ ಸಮಾಜದ ಸಮಾನ ಮನಸ್ಕರ ತಂಡ ತಿಳಿಸಿದೆ.

ಪರಿಶಿಷ್ಟ ಪಂಗಡದ ಬೇಡಿಕೆಗಳು:

* ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ತಕ್ಷಣ ಜಾರಿಯಾಗಬೇಕು.

* ತ್ರಿಸದಸ್ಯ ಸಮಿತಿಯಿಂದ ಶೇ.7.5 ಮೀಸಲಾತಿ ವಿಚಾರ ಹೊರಗಿಡಬೇಕು.

* ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿಗೆ ತಕ್ಷಣ ಕಡಿವಾಣ ಹಾಕಬೇಕು.

* ತಳವಾರ, ಪರಿವಾರ ಜಾತಿಗಳನ್ನು STಗೆ ಸೇರಿಸಿರುವ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟತೆ ನೀಡಬೇಕು.

* SC/ST ಸಮುದಾಯಕ್ಕೆ ಕಡಿತಗೊಳಿಸಿರುವ ಶೇ.70ರಷ್ಟು ಅನುದಾನವನ್ನೂ ಸೇರಿಸಿ ಈ ಬಾರಿ ಬಜೆಟ್ ಮಂಡಿಸಬೇಕು.

* ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಕೂಡಲೇ ಅಧಿಕಾರಿಗಳ ನೇಮಕ ಆಗಬೇಕು.

* SC/ST ಬ್ಯಾಕ್ ಲಾಗ್ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು.

* ಅಯೋದ್ಯೆಯಲ್ಲಿ ರಾಮಮಂದಿರದ ಎದುರೇ ಬೃಹತ್ ವಾಲ್ಮೀಕಿ ಪ್ರತಿಮೆ ನಿರ್ಮಾಣ ಮಾಡಬೇಕು.

* ರಾಜ್ಯದ ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಡಬೇಕು.



Join Whatsapp