ಬೆಂಗಳೂರು: ಟೊಮೆಟೊ ಬೆಲೆ ಶತಕ ದಾಟಿದ ಹಿನ್ನೆಲೆ ಫುಲ್ ಡಿಮ್ಯಾಂಡ್ ಆಗಿದ್ದು ಕಳವು ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಟೊಮೆಟೊ ಬೆಳೆಗಾರರು ಜಮೀನುಗಳಿಗೆ ಕಾವಲು ಕಾಯುತ್ತಿದ್ದಾರೆ. ಆದರೆ ಈ ಪ್ರಕರಣದಲ್ಲಿ ಸುಮಾರು 2 ಸಾವಿರ ಕೆಜಿಗೂ ಹೆಚ್ಚು ಟೊಮೆಟೊ ಇದ್ದ ಬೊಲೆರೋ ವಾಹನವನ್ನೇ ಖದೀಮರು ಕದ್ದಿದ್ದಾರೆ.
ಬೆಂಗಳೂರಿನ ಯಲಹಂಕ ಬಳಿಯ ಚಿಕ್ಕಜಾಲ ಗ್ರಾಮದ ಬಳಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಶನಿವಾರ (ಜು.08) ಬೆಳಿಗ್ಗೆ ರೈತ ಹಿರಿಯೂರಿನಿಂದ ಕೋಲಾರಕ್ಕೆ ಟೊಮ್ಯಾಟೊ ಸಾಗಿಸುತ್ತಿದ್ದರು. ಇದನ್ನು ಕಂಡ ಮೂವರು ಕಾರಿನಲ್ಲಿ ಟೊಮೆಟೊ ತುಂಬಿದ್ದ ಬೊಲೆರೋ ವಾಹನವನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ.
ನಂತರ ಆರ್ಎಮ್ಸಿಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ಬೊಲೆರೋ ವಾಹನವನ್ನು ಅಡ್ಡಗಟ್ಟಿದ್ದಾರೆ. ನಂತರ ಕಾರಿಗೆ ಪೀಣ್ಯಾ ಬಳಿ ನಿಮ್ಮ ಬೊಲೆರೋ ವಾಹನದಿಂದ ಟಚ್ ಮಾಡಿದ್ದೀರಿ ಅಂತ ನಾಟಕವಾಡಿ ಡ್ರೈವರ್ ಮತ್ತು ರೈತನಿಗೆ ಅವಾಜ್ ಹಾಕಿ ಹಲ್ಲೆ ಮಾಡಿದ್ದಾರೆ.
ಬಳಿಕ ಹಣ ಕೊಡು ಎಂದಿದ್ದಾರೆ. ಹಣ ಇಲ್ಲ ಎಂದಾಗ ಮೊಬೈಲ್ನಲ್ಲಿದ್ದ ಹಣ ಟ್ರಾನ್ಸಫರ್ ಮಾಡಿ ಎಂದು ಹಣ ದೋಚಿದ್ದಾರೆ. ನಂತರ ಬೊಲೊರೋದಲ್ಲಿದ್ದ ಟೊಮೆಟೊ ನೋಡಿದ್ದಾರೆ. ನಂತರ ಬೊಲೊರೋ ಸಮೇತ ರೈತ ಮತ್ತು ಡ್ರೈವರ್ನನ್ನು ಕರೆದುಕೊಂಡು ಚಿಕ್ಕಜಾಲ ತನಕ ಹೋಗಿದ್ದಾರೆ. ಚಿಕ್ಕಜಾಲ ಬಳಿ ಡ್ರೈವರ್ ಮತ್ತು ರೈತನನ್ನು ಬಿಟ್ಟು ಟೊಮೆಟೊ ತುಂಬಿದ್ದ ವಾಹನ ಸಮೇತ ಎಸ್ಕೇಪ್ ಆಗಿದ್ದಾರೆ.
ಸದ್ಯ ಘಟನೆ ಸಂಬಂಧ ಆರ್ಎಮ್ಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಸುಮಾರು 200 ಟ್ರೆನಲ್ಲಿದ್ದ 2 ಸಾವಿರ ಕೆಜಿ ಟೊಮೆಟೊ ಕಳೆದುಕೊಂಡು ರೈತ ಕಂಗಾಲಾಗಿದ್ದಾರೆ.