ಟೋಕಿಯೋ, ಆ,2: 41 ವರ್ಷಗಳ ಬಳಿಕ ಒಲಿಂಪಿಕ್ ಹಾಕಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಭಾರತದ ಪುರುಷರ ತಂಡ ಸೆಮಿಫೈನಲ್ ಪಂದ್ಯದಲ್ಲಿ 5-2 ಗೋಲುಗಳ ಅಂತರದಲ್ಲಿ ಬೆಲ್ಜಿಯಂಗೆ ಶರಣಾಗಿದೆ.
ಡಿಫೆನ್ಸ್ ನಲ್ಲಿ ಪದೇ ಪದೇ ಎಡವಿದ ಭಾರತ, ಸಾಲು ಸಾಲು ಪೆನಾಲ್ಟಿ ತೆತ್ತು ತನ್ನ ಫೈನಲ್ ಪಯಣದ ಕನಸನ್ನು ಭಗ್ನವಾಗಿಸಿತು.
ಜರ್ಮನಿ – ಆಸ್ಟ್ರೇಲಿಯಾ ನಡುವಿನ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಸೋಲುವ ತಂಡದ ವಿರುದ್ಧ ಭಾರತ ಕಂಚಿನ ಪದಕಕ್ಕಾಗಿ ಪಂದ್ಯವನ್ನಾಡಲಿದೆ.
ಪಂದ್ಯ ಆರಂಭವಾಗಿ ಎರಡನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬೆಲ್ಜಿಯಂನ ಫೆಲಿಕ್ಸ್ ಡಿನೇಯರ್ ಮೊದಲ ಗೋಲಾಗಿ ಪರಿವರ್ತಿಸಿದರು.
ಪಂದ್ಯದ ಒಂಬತ್ತನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಸಿಂಗ್ ಭಾರತಕ್ಕೆ ಮೊದಲ ಗೋಲು ತಂದುಕೊಟ್ಟರು.
ಟೂರ್ನಿಯಲ್ಲಿ ತಮ್ಮ ಐದನೇ ಗೋಲು ದಾಖಲಿಸಿದ ಹರ್ಮನ್ ಪ್ರೀತ್, ಭಾರತಕ್ಕೆ ಸಮಬಲ ಸಾಧಿಸಲು ನೆರವಾದರು. ಮೊದಲಗೋಲು ದಾಖಲಾದ ಎರಡು ನಿಮಿಷದ ಅಂತರದಲ್ಲೇ ಮಂದೀಪ್ ಸಿಂಗ್ ಮತ್ತೊಂದು ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಬೆಲ್ಜಿಯಂ ಆಟಗಾರರು ಇದಕ್ಕೆ ಮೇಲ್ಮನವಿ ಸಲ್ಲಿಸಿ, ಮಂದೀಪ್ ತಮ್ಮ ಹಾಕಿ ಸ್ಟಿಕ್ಕಿನ ಬೆನ್ನಿನ ಭಾಗದಲ್ಲಿ ಗೋಲು ಹೊಡೆದಿದ್ದಾರೆ ಎಂದಿದ್ದರು. ಆದರೆ, ರೆಫರಿ ಭಾರತದ ಪರವಾಗಿ ತೀರ್ಪಿತ್ತರು.
ಪಂದ್ಯದ ದ್ವಿತೀಯಾರ್ಧದಲ್ಲಿ ಬೆಲ್ಜಿಯಂ ಪರ ಅಲೆಕ್ಸಾಂಡರ್ ಹೆನ್ರಿಕ್ಸ್ ಗೋಲು ಬಾರಿಸಿ ಸಮಬಲ ಸಾಧಿಸಲು ನೆರವಾದರು. ನಂತರ ತೀವ್ರ ಜಿದ್ದಾಜಿದ್ದಿನಿಂದ ಪಂದ್ಯ ಸಾಗಿತು. ಉಭಯ ತಂಡಗಳೂ ಯಾವ ಗೋಲನ್ನೂ ಬಿಟ್ಟುಕೊಡಲಿಲ್ಲ. ಪಂದ್ಯದ ತೃತೀಯಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಭಾರತ ಪೆನಾಲ್ಟಿಗಳನ್ನು ಗೋಲುಗಳಾಗಿ ಪರಿವರ್ತಿಸುವ ಅವಕಾಶಗಳನ್ನು ಕಳೆದುಕೊಂಡಿತು. ಆದ್ದರಿಂದ ಗೋಲು ರಹಿತವಾದ ತೃತೀಯಾರ್ಧ ಪಂದ್ಯವನ್ನು ಕುತೂಹಹಲಕರ ನಾಲ್ಕನೇ ಅವಧಿಗೆ ಕೊಂಡೊಯ್ದಿತು.
ನಾಲ್ಕನೇ ಅವಧಿಯಲ್ಲಿ ಬೆಲ್ಜಿಯಂನ ಅಲೆಕ್ಸಾಂಡರ್ ಹೆನ್ರಿಕ್ಸ್ ಮತ್ತೊಂದು ಗೋಲು ಬಾರಿಸಿ ಬೆಲ್ಜಿಯಂಗೆ 3-2ರ ಮುನ್ನಡೆ ತಂದಿತ್ತರು. ಪಂದ್ಯಾವಳಿಯ 11ನೇ ಗೋಲು ಬಾರಿಸಿದ ಹೆನ್ರಿಕ್ಸ್ ಪಂದ್ಯದಲ್ಲಿ ಬೆಲ್ಜಿಯಂಗೆ ಮುನ್ನಡೆ ಒದಗಿಸಿದರು. ಸಾಲು ಸಾಲು ಪೆನಾಲ್ಟಿ ಕಾರ್ನರ್ ಮಾಡಿದ ಭಾರತಕ್ಕೆ ಹಿನ್ನಡೆಯಾಯಿತು. ಅಲೆಕ್ಸಾಂಡರ್ ಹೆನ್ರಿಕ್ಸ್ ಮತ್ತೊಂದು ಗೋಲು ಬಾರಿಸಿ 4-2ರ ಮುನ್ನಡೆಗೆ ಕಾರಣರಾದರು. ಕೊನೆಯಲ್ಲಿ ಮತ್ತೊಂದು ಗೋಲು ಬಾರಿಸಿದ ಬೆಲ್ಜಿಯಂ 5-2ರ ಮುನ್ನಡೆ ಕಂಡು ಗೆಲುವಿನ ನಗೆ ಬೀರಿತು.
ಬೆಲ್ಜಿಯಂ ತಂಡವು ಇಂದು ನಡೆಯಲಿರುವ ಮತ್ತೊಂದು ಸೆಮಿಫೈನಲ್ ನಲ್ಲಿ ಸೆಣಸಲಿರುವ ಜರ್ಮನಿ ಮತ್ತು ಆಸ್ಟ್ರೇಲಿಯಾದ ನಡುವಿನ ವಿಜೇತರನ್ನು ಫೈನಲ್ ನಲ್ಲಿ ಎದುರಿಸಲಿದೆ. ಸೋತ ತಂಡವು, ಭಾರತದೊಂದಿಗೆ ಕಂಚಿನ ಪದಕಕ್ಕಾಗಿ ಸ್ಪರ್ಧಿಸಲಿದೆ.