ಗಾಝಾ ಬಿಕ್ಕಟ್ಟು ಪರಿಹಾರಕ್ಕಾಗಿ ಇಂದು ವಿಶ್ವಸಂಸ್ಥೆಯ ತುರ್ತು ಅಧಿವೇಶನ

Prasthutha|

ವಿಶ್ವಸಂಸ್ಥೆ: ಗಾಝಾದಲ್ಲಿ ಉಂಟಾಗಿರುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಇಂದು (ಡಿ.12) ವಿಶ್ವಸಂಸ್ಥೆ ಸಾಮಾನ್ಯ ಸಭೆಯ ತುರ್ತು ಅಧಿವೇಶನ ಕರೆಯಲಾಗಿದೆ. 193 ಸದಸ್ಯರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 12 ರ ಮಂಗಳವಾರ ಗಾಝಾ ಕುರಿತು ವಿಶೇಷ ಅಧಿವೇಶನ ನಡೆಸುವುದಾಗಿ ಘೋಷಿಸಿದೆ ಎಂದು ವಿಶ್ವಸಂಸ್ಥೆ ಸಾಮಾನ್ಯಸಭೆಯ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಕಚೇರಿಯ ಪತ್ರಿಕಾ ಹೇಳಿಕೆ ತಿಳಿಸಿದೆ.

- Advertisement -

ಸಾಮಾನ್ಯ ಸಭೆಯ ಹತ್ತನೇ ತುರ್ತು ವಿಶೇಷ ಅಧಿವೇಶನದ 45 ನೇ ಪೂರ್ಣ ಸಭೆಯನ್ನು ಕರೆಯುವುದಾಗಿ ಸದಸ್ಯ ರಾಷ್ಟ್ರಗಳಿಗೆ ಮಾಹಿತಿ ನೀಡಿದ್ದಾರೆ ಎಂದೂ ಪತ್ರಿಕಾ ಹೇಳಿಕೆ ತಿಳಿಸಿದೆ.

ಈಜಿಪ್ಟ್ ಮತ್ತು ಮೌರಿಟಾನಿಯಾ ದೇಶಗಳು ಅಧ್ಯಕ್ಷ ಫ್ರಾನ್ಸಿಸ್ ಅವರಿಗೆ ಪತ್ರ ಬರೆದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯ 377 ಅನ್ನು ಉಲ್ಲೇಖಿಸಿ ತುರ್ತು ಸಭೆ ನಡೆಸುವಂತೆ ಔಪಚಾರಿಕವಾಗಿ ವಿನಂತಿಸಿದ್ದವು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಗಾಝಾ ಕದನ ವಿರಾಮ ನಿರ್ಣಯವನ್ನು ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗಿರುವ ಅಮೆರಿಕ ವೀಟೊ ಮಾಡಿದ ನಂತರ ಮತ್ತೆ ತುರ್ತಾಗಿ ಸಭೆ ಸೇರುವುದು ಅಗತ್ಯವಾಗಿದೆ ಎಂದು ಪತ್ರದಲ್ಲಿ ಒತ್ತಿ ಹೇಳಲಾಗಿತ್ತು.

- Advertisement -

ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುವ ತನ್ನ ಪ್ರಾಥಮಿಕ ಜವಾಬ್ದಾರಿಯನ್ನು ನಿರ್ವಹಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ವಿಫಲವಾದ ಸಂದರ್ಭದಲ್ಲಿ ಕ್ರಮ ತೆಗೆದುಕೊಳ್ಳಲು ನಿರ್ಣಯ 377 ವಿಶ್ವಸಂಸ್ಥೆಗೆ ಅವಕಾಶ ನೀಡುತ್ತದೆ. ಈ ನಿರ್ಣಯವನ್ನು ಮೊಟ್ಟ ಮೊದಲಿಗೆ 1950 ರಲ್ಲಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಅಂಗೀಕರಿಸಿತ್ತು. ಗಾಜಾದಲ್ಲಿ ತಕ್ಷಣದ ಮಾನವೀಯ ಕದನ ವಿರಾಮಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಬೇಡಿಕೆಯನ್ನು ಅಮೆರಿಕ ಶುಕ್ರವಾರ ವೀಟೋ ಮಾಡಿದ ನಂತರ ನಿರ್ಣಯ 377ರ ಅಡಿ ಈ ಕ್ರಮ ಕೈಗೊಳ್ಳಲಾಗಿದೆ.

ಅಕ್ಟೋಬರ್​ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, ಗಾಝಾದಲ್ಲಿ ತಕ್ಷಣವೇ ಮಾನವೀಯ ಕದನ ವಿರಾಮ ಘೋಷಿಸಬೇಕೆಂದು ಕರೆ ನೀಡುವ ನಿರ್ಣಯ ಅಂಗೀಕರಿಸಲಾಗಿತ್ತು. ನಿರ್ಣಯದ ಪರವಾಗಿ 121 ಮತ, ವಿರುದ್ಧ 14 ಮತ ಬಂದಿದ್ದವು. 44 ರಾಷ್ಟ್ರಗಳು 44 ರಾಷ್ಟ್ರಗಳು ಗೈರುಹಾಜರಾಗಿದ್ದವು. ಆದರೆ ಸಾಮಾನ್ಯ ಸಭೆಯ ಕದನ ವಿರಾಮಕ್ಕೆ ಕರೆ ನೀಡುವ ನಿರ್ಣಯವನ್ನು ವೀಟೊ ಚಲಾಯಿಸುವ ಮೂಲಕ ಅಮೆರಿಕ ತಡೆಹಿಡಿದಿತ್ತು. ಅಮೆರಿಕದ ಈ ಕ್ರಮಕ್ಕೆ ವಿಶ್ವದ ಹಲವಾರು ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿವೆ.

Join Whatsapp