ಮಂಗಳೂರು: ಸಮವಸ್ತ್ರದ ಹೆಸರಿನಲ್ಲಿ ಮುಸ್ಲಿಮ್ ಹೆಣ್ಣು ಮಕ್ಕಳನ್ನು ವಿದ್ಯೆ ಕಲಿಯದಂತೆ ತಡೆಯುವ ಹುನ್ನಾರ ನಡೆಯತು್ತಿದೆ. ಇದು ಮಹಾನ್ ಅಪರಾಧ ಎಂದು ಹಿರಿಯ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಈ ದಿನ ಕುಂದಾಪುರದ ಕಾಲೇಜಿನಲ್ಲಿ ನಡೆದಿದ್ದ ಘಟನೆಯ ವಿಡಿಯೋವನ್ನು ನೋಡಿದೆ. ಮನಸ್ಸಿಗೆ ಬಹಳ ದುಃಖವಾಯಿತು. ಸುಶಿಕ್ಷಿತರೆಂದು ಗುರುತಿಸಿಕೊಂಡ, ಶಿಕ್ಷಣವನ್ನು ಬಯಸಿ ಬರುವ ವಿದ್ಯಾರ್ಥಿಗಳಿಗೆ ಜಾತಿಭೇದವಿಲ್ಲದೆ ಮಕ್ಕಳಿಗೆ ಸುಜ್ಞಾನವನ್ನು ಧಾರೆ ಎರೆಯುವ ಕಾಲೇಜಿನ ಪ್ರಾಶುಪಾಲರು, ಕಾಲೇಜಿನ ಬಾಗಿಲಿಗೆ ಬಂದಿದ್ದ ತನ್ನದೇ ವಿದ್ಯಾರ್ಥಿಗಳನ್ನು ಕಾಲೇಜು ಆವರಣದಿಂದ ಹೊರ ದೂಡುವ ದೃಶ್ಯ ನೋಡಿ ಕಣ್ಣಿನಲ್ಲಿ ನೀರು ಬಂತು ಎಂದು ತಿಳಿಸಿದ್ದಾರೆ.
ಕೇವಲ ಹಿಜಾಬ್ ಧರಿಸಿ ಬಂದಿದ್ದಾರೆ ಎನ್ನುವ ಕಾರಣಕ್ಕೆ ಇವರನ್ನು ಕಾಲೇಜಿನಿಂದ ಹೊರ ಹಾಕಲಾಯಿತು. ನಾವು ಓದುತ್ತಿರುವ ಸಮಯದಲ್ಲಿ ಶಿಕ್ಷಣ ಸಂಸ್ಥೆಗಳು ಸಮವಸ್ತ್ರದ ಬಗ್ಗೆ ತಲೆ ಕೆಡಿಸಿ ಕೊಂಡಿರಲಿಲ್ಲ. ಹೈಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ ವಾರದ ಐದು ದಿನ ಸಮವಸ್ತ್ರ ಹಾಕಬೇಕಾಗಿತ್ತು. ಆದರೂ ಕೆಲವೊಮ್ಮೆ ಅನಿವಾರ್ಯ ಕಾರಣಕ್ಕೆ ಬಣ್ಣದ ವಸ್ತ್ರ ಹಾಕಿದರೆ, ವಿನಾಯಿತಿ ಇತ್ತು. ಬಾಗಿಲು ಹಾಕಿ ವಾಪಾಸ್ ಕಳುಹಿಸುತ್ತಿರಲಿಲ್ಲ. ಇಡೀ ಶಾಲೆಯಲ್ಲಿ ಬೆರಳಣಿಕೆಯ ಮುಸ್ಲಿಂ ಹುಡುಗರು ಇದ್ದರು. ಉಳಿದಂತೆ ಹಿoದೂ ಮತ್ತು ಕ್ರಿಶ್ಚಿಯನ್ ಹುಡುಗರು, ಹುಡುಗಿಯರು ಇದ್ದರು. ಕಾಲೇಜು ಹೋಗುವಾಗ ಒಬ್ಬಳು ಮುಸ್ಲಿಂ ಹುಡುಗಿ ಇದ್ದಳು. ಆಕೆ ಹಿಜಾಬ್ ಧರಿಸಿಕೊಂಡೇ ತರಗತಿಗೆ ಹಾಜರಾಗುತ್ತಿದ್ದಳು. ಕೆಲವೇ ಬ್ರಾಹ್ಮಣರು ಬಿಳಿಪಂಚೆ ಉಟ್ಟುಕೊಂಡು, ತಲೆಯಲ್ಲಿ ಜುಟ್ಟು ಬಿಟ್ಟುಕೊಂಡು ಬರುತ್ತಿದ್ದರು. ಸಾಂಪ್ರದಾಯಿಕ ಕಟ್ಟುಪಾಡಿನ ಹಿನ್ನೆಲೆ ಇದ್ದವರು ಅವರದ್ದೇ ಆದ ಉಡುಗೆ ತೊಡುಗೆಗಳೊಂದಿಗೆ ಬರುತ್ತಿದ್ದರು. ಅವರಿಗೆ ಸಮವಸ್ತ್ರ ದಿಂದ ವಿನಾಯಿತಿ ಇತ್ತು. ಇದರಿಂದ ನಮಗೆ ಯಾರಿಗೂ ತೊಂದರೆ ಆಗಿರಲಿಲ್ಲ ಅಥವಾ ನಮ್ಮ ಶಿಕ್ಷಣಕ್ಕೆ ಅಡ್ಡಿಯಾಗಿರಲಿಲ್ಲ.
ಕಳೆದ ಕೆಲವು ದಿನಗಳಿಂದ ಶಿಕ್ಷಣದ ಕಾಶಿ ಎಂದೇ ಖ್ಯಾತಿ ಪಡೆದಿರುವ ಕರಾವಳಿ ಜಿಲ್ಲೆಗಳಲ್ಲಿ ಮುಸ್ಲಿಂ ಸಹೋದರಿಯರು ತಮ್ಮ ಸಂಪ್ರದಾಯಿಕ ಉಡುಗೆಯಾದ ಹಿಜಾಬ್ ಅನ್ನು ಹಾಕಿಕೊಂಡು ಬರುವ ಬಗ್ಗೆ ಶಿಕ್ಷಣ ಸಂಸ್ಥೆಗಳು ತಕರಾರು ನಿರ್ಬಂಧ ವೇರಿ ಅವರನ್ನು ತರಗತಿಗೆ ಪ್ರವೇಶ ಮಾಡದಂತೆ ತಡೆಯುತ್ತಿರುವ ಈ ಬೆಳವಣಿಗೆ ಬಹಳ ಆತಂಕಕಾರಿಯಾಗಿದೆ ಎಂದು ಅವರು ಬರೆದಿದ್ದಾರೆ.
ಹಿಜಾಬ್: ಸಂಪ್ರದಾಯಸ್ತ ಮುಸ್ಲಿಂ ಧರ್ಮದಲ್ಲಿ ಜನಿಸಿದ ಸ್ತ್ರೀಯರಿಗೆ ತಮ್ಮ ಬಾಲ್ಯವಸ್ಥೆಯಲ್ಲೇ ಧರಿಸಿ ಪರಿಪಾಠ ಮಾಡಿಸಿದ್ದ ಉಡುಗೆ. ಅದನ್ನು ಧರಿಸಲು ಆರಂಭಿಸುವಾಗ ಆ ಮಗುವಿಗೆ ಆ ವಸ್ತ್ರದ ಬಗ್ಗೆಯಾಗಲಿ, ಅಗತ್ಯತೆಯ ಬಗ್ಗೆಯಾಗಲಿ ತಿಳುವಳಿಕೆ ಇರುವುದಿಲ್ಲ. ಬೆಳೆಯುತ್ತಾ ಬಂದಂತೆ ಅದು ತನ್ನ ದಿನನಿತ್ಯದ ಉಡುಗೆಯoತೆ ಅನಿವಾರ್ಯ ವಸ್ತ್ರವಾಗಿ ಧರಿರಿಸುತ್ತಾರೆ.
ಬಹಳ ಮುಖ್ಯವಾಗಿ ಮಗು ಬೆಳೆದಂತೆ ಈ ಹಿಜಾಬ್ ಗೆ ಧಾರ್ಮಿಕ ಮತ್ತು ಸಾಂಪ್ರದಾಯಿಕ ಪಾವಿತ್ಯತೆ ಏನು ಎಂಬುದನ್ನು ಹೇಳಿರುತ್ತಾರೆ. ಮಹಿಳೆ /ಯುವತಿ ತನ್ನ ಕೂದಲನ್ನು ತನ್ನ ಮನೆಯಲ್ಲಿ ವಾಸಿಸುತ್ತಿರುವ ತಂದೆ ಅಣ್ಣ ತಮ್ಮದಿರ ಹೊರತಾಗಿ ಉಳಿದ ಯಾವುದೇ ಸ್ವ ಧರ್ಮದ ಅಥವಾ ಅನ್ಯ ಧರ್ಮದ ಗಂಡಸರಿಗೆ ತೋರಿಸುವಂತಿಲ್ಲ. ಆ ಪವಿತ್ರ ಕೂದಲನ್ನು ತನ್ನನ್ನು ಮದುವೆ ಯಾಗುವ ಹುಡುಗನಿಗೆ /ಗಂಡನಿಗಾಗಿ ಮೀಸಲು ಇಡಬೇಕು. ಆತ ಮಾತ್ರ ಆ ಕೂದಲನ್ನು ನೋಡಲು ಹಕ್ಕು ಉಳ್ಳವನಾಗಿರುತ್ತಾನೆ. ಈ ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ಬೆಳೆದಿರುವ ಹೆಣ್ಣುಮಕ್ಕಳನ್ನು ಒಮ್ಮಿoದೊಮ್ಮೆಗೆ ಸಮವಸ್ತ್ರದ ಕಾರಣ ಒಡ್ಡಿ ಅದನ್ನು ತ್ಯಜಿಸಲು ಹೇಳುವುದು ಆ ವಿದ್ಯಾರ್ಥಿಗೆ ಮಾಡುವ ದೌರ್ಜನ್ಯ ಆಗುತ್ತದೆ. ಚಿಕ್ಕಂದಿನಿಂದ ರೂಢಿಯಾಗಿ ಬಳಸಿಕೊಂಡಿದ್ದ ಹಿಜಾಬ್ ಅನ್ನು ತೊರೆಯಲು ಆ ಹುಡುಗಿಗೆ ಬಹಳಷ್ಟು ಕಾಲವಕಾಶ ಬೇಕಾದೀತು ಅಥವಾ ತನ್ನ ಪ್ರಯತ್ನದ ಹೊರತಾಗಿಯೂ ಸಾಧ್ಯವಾಗದೆ ಹೋಗಬಹುದು.
ಇದನ್ನು ಅನ್ಯ ಧರ್ಮ ದವರು ಅರ್ಥ ಮಾಡಿಕೊಳ್ಳಬೇಕು. ನಾವು ಚಿಕ್ಕಂದಿನಿಂದ ಮುಸ್ಲಿಂ ಮಹಿಳೆಯರನ್ನು ಅವರ ಬುರ್ಖಾ ಮತ್ತು ಹಿಜಾಬ್ ನಲ್ಲೇ ಕಂಡವರು. ಅದನ್ನು ಅವರ ಧರ್ಮದ ಹಿನ್ನೆಲೆಯಲ್ಲಿ ತಲ ತಲಾoತರದಿಂದ ಅನುಸರಿಸಿಕೊಂಡು ಬಂದವರು. ಅವರನ್ನು ನಾವು ಅದೇ ರೀತಿಯಲ್ಲಿ ಸ್ವೀಕರಿಸಿದ್ದೇವೆ. ಗೌರವಿಸಿದ್ದೇವೆ.
ಮುಸ್ಲಿಮರು ವಿದ್ಯಾವಂತರಾಗಬೇಕು, ಸಮಾಜದಲ್ಲಿ ಮುಂದೆ ಬರಬೇಕು ಎಂದು ನಾವು ಬಯಸುತ್ತೇವೆ. ಅದರಲ್ಲೂ ಮುಸ್ಲಿಂ ಮಹಿಳೆಯರು ಇತ್ತೀಚೆಗಷ್ಟೇ ಶಿಕ್ಷಣ ಪಡೆಯಲು ಮುಂದೆ ಬರುವ ಪ್ರಯತ್ನ ಮಾಡುತ್ತಿದ್ದಾರೆ. ಧೈರ್ಯ ಮಾಡುತ್ತಿದ್ದಾರೆ. ಅವರು ಮೊದಲು ಶಿಕ್ಷಣ ಪಡೆದು ಮುಂದೆ ಬರಲಿ. ಸಮಾಜದಲ್ಲಿ ಉನ್ನತ ಸ್ಥಾನವನ್ನು ಗಳಿಸಲಿ. ತಮ್ಮ ಸಂಪ್ರದಾಯದಲ್ಲಿ ಯಾವುದಾದರೂ ಬದಲಾವಣೆ ಅಗತ್ಯ ಎಂದು ಕಂಡು ಬಂದರೆ ಅದನ್ನು ಅವರೇ ಮಾಡಲಿ.
ಸಮವಸ್ತ್ರದ ಹೆಸರಿನಲ್ಲಿ ಅವರನ್ನು ವಿದ್ಯೆ ಕಲಿಯದಂತೆ ತಡೆಯುವುದು ಮಹಾನ್ ಅಪರಾಧ ಆಗುತ್ತದೆ. ನಮ್ಮ ಅನ್ಯ ಧಾರ್ಮಿಯ ಸಹೋದರಿಯರನ್ನು ಶಿಕ್ಷಣ ವಂಚಿತರಾಗ ಬಾರದು. ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆಯನ್ನು ಕೊಡಿ. ಸಮ ವಸ್ತ್ರದ ಹಠಮಾರಿತನವನ್ನು ಬಿಟ್ಟುಬಿಡಿ. ನನ್ನ ನಾಡು, ಸಾಮರಸ್ಯದ, ಸಾಮ ಲಹರಿಯ, ಮೇರು ಬೀಡಾಗ ಬೇಕು.ಇದು ನಮ್ಮ ಆಶಯವಾಗಬೇಕು ಎಂದು ದಿನೇಶ್ ಹೆಗ್ಡೆ ಬರೆದಿದ್ದಾರೆ.