ಕೋಝಿಕೋಡ್ : ಕೇರಳದ ಕೋಝಿಕೋಡ್ ರೈಲ್ವೆ ನಿಲ್ದಾಣದಲ್ಲಿ ಚೆನ್ನೈ-ಮಂಗಳೂರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಬಳಿ 100ಕ್ಕೂ ಅಧಿಕ ಜಿಲೆಟಿನ್ ಕಡ್ಡಿಗಳು ಹಾಗೂ 350 ಡಿಟೊನೇಟರ್ ಗಳ ಸಹಿತ ಭಾರೀ ಪ್ರಮಾಣದ ಸ್ಫೋಟಕ ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ.
ರೈಲ್ವೆ ಸಂರಕ್ಷಣಾ ಪಡೆ (ಆರ್ ಪಿಎಫ್) ಮಹಿಳಾ ಪ್ರಯಾಣಿಕರೊಬ್ಬರಿಂದ ಸ್ಫೋಟಕಗಳನ್ನು ವಶಕ್ಕೆ ಪಡೆದಿದೆ.
ವಿಷಯಕ್ಕೆ ಸಂಬಂಧಿಸಿ ತಮಿಳುನಾಡು ನಿವಾಸಿ ರಮಣಿ ಎಂಬಾಕೆಯನ್ನು ವಶಕ್ಕೆ ಪಡೆಯಲಾಗಿದೆ. ಮಹಿಳೆಯು ಆಸನದ ಕೆಳಗೆ ಸ್ಫೋಟಕಗಳನ್ನು ಇಡಲಾಗಿತ್ತು. ಬಾವಿ ತೋಡಲು ಜಿಲೆಟಿನ್ ಕಡ್ಡಿಗಳನ್ನು ತರುತ್ತಿದ್ದೆ ಎಂದು ಮಹಿಳೆ ಹೇಳಿರುವುದಾಗಿ ವರದಿಗಳು ತಿಳಿಸಿವೆ.
ವಶಕ್ಕೆ ಪಡೆಯಲಾದ ಮಹಿಳೆ ತಮಿಳುನಾಡಿನ ತಿರುವಣ್ಣಾಮಲೈ ಮೂಲದವಳಾಗಿದ್ದು, ವೆಲ್ಲೂರಿನ ಕಟ್ಪಾಡಿ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಿದ್ದಳು ಎನ್ನಲಾಗಿದೆ.
ಘಟನೆಯ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಕಣ್ಣೂರಿಗೆ ಪ್ರಯಾಣಿಸುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಣ್ಣೂರು ರಾಜಕೀಯ ಘರ್ಷಣೆ ಹಾಗೂ ಬಾಂಬ್ ಸ್ಫೋಟಗಳಿಗೆ ಕುಖ್ಯಾತಿ ಪಡೆದಿದೆ.