ಟಿಪ್ಪು ವಿರೋಧಿಗಳು ಮತ್ತು ಮೌಡ್ಯದ ಪ್ರತಿಪಾದಕರು ಚಂದ್ರಯಾನ- 3 ಸಂಭ್ರಮಿಸಿ ದೇಶಪ್ರೇಮ ವ್ಯಕ್ತಪಡಿಸುವ ಅರ್ಹತೆ ಹೊಂದಿಲ್ಲ

Prasthutha|

►ನವೀನ್ ಸೂರಿಂಜೆ

- Advertisement -

ಇಡೀ ಜಗತ್ತಿಗೆ ಮೊದಲು ರಾಕೆಟ್ ತಂತ್ರಜ್ಞಾನವನ್ನು ತೋರಿಸಿಕೊಟ್ಟವರು ನಮ್ಮ ಕನ್ನಡದ ಟಿಪ್ಪು ಸುಲ್ತಾನ್. ಇಡೀ ಜಗತ್ತಿನ ಮೊದಲ ರಾಕೆಟ್ ಉಡಾವಣಾ ಕೇಂದ್ರ ಇರುವುದು ಟಿಪ್ಪುವಿನ ರಾಜಧಾನಿ ಶ್ರೀರಂಗಪಟ್ಟಣದಲ್ಲಿ. ಭಾರತದ ರಾಕೆಟ್ ಮ್ಯಾನ್ ಎಂದೇ ಖ್ಯಾತರಾಗಿದ್ದ ಎಪಿಜೆ ಅಬ್ದುಲ್ ಕಲಾಂ ಅವರು ನಾಸಾದ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ, ಬ್ರಿಟೀಷರ ವಿರುದ್ದ ಟಿಪ್ಪು ರಾಕೇಟ್ ಬಳಸಿದ ವರ್ಣಚಿತ್ರವನ್ನು ದೊಡ್ಡದಾಗಿ ಪ್ರದರ್ಶಿಸಲಾಗಿತ್ತು. ಅಲ್ಲಿಂದ ಭಾರತಕ್ಕೆ ಬಂದ ಎಪಿಜೆ ಅಬ್ದುಲ್ ಕಲಾಂ ನೇರವಾಗಿ ಶ್ರೀರಂಗಪಟ್ಟಣಕ್ಕೆ ಬಂದು ಟಿಪ್ಪು ರಾಕೆಟ್ ಬಗ್ಗೆ ಅಧ್ಯಯನ ನಡೆಸಿದ್ದರು.

ಟಿಪ್ಪು ಸ್ವಾತಂತ್ರ್ಯ ಹೋರಾಟಕ್ಕಾಗಿ ರಾಕೆಟ್ ಬಳಸಿದರು. ಸಾವಿರಾರು ಸಂಖ್ಯೆಯಲ್ಲಿ ರಾಕೆಟ್ ಗಳನ್ನು ಸೃಷ್ಟಿಸಿ ಅದಕ್ಕೆಂದೇ ಸೈನ್ಯದಲ್ಲಿ “ರಾಕೆಟ್ ಪಡೆ”ಯನ್ನು ಸ್ಥಾಪಿಸಿದರು. ಈ ರೀತಿಯ ರಾಕೆಟ್ ಪಡೆಯನ್ನು ಜಗತ್ತಿನಲ್ಲಿ ಮೊದಲು ಸ್ಥಾಪಿಸಿ ಯಶಸ್ವಿಯಾಗಿದ್ದು ನಮ್ಮ ಭಾರತದ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್. ಬ್ರಿಟೀಷರು ಸೇರಿದಂತೆ ಅಂದಿನ ಜಗತ್ತಿನ ಎಲ್ಲಾ ಮುಂದುವರೆದ ರಾಷ್ಟ್ರಗಳು ಟಿಪ್ಪುವಿನ ರಾಕೆಟ್ ಬಗ್ಗೆ ಅಧ್ಯಯನ ಮಾಡಲು ಶುರು ಮಾಡಿದರು. ಅಂದು ಟಿಪ್ಪುವಿನಿಂದ ಆರಂಭವಾದ ರಾಕೆಟ್ ತಂತ್ರಜ್ಞಾನವು ಇಂದು ನಮ್ಮನ್ನು ಮಂಗಳ, ಚಂದ್ರಯಾನದವರೆಗೆ ತಂದು ಮುಟ್ಟಿಸಿದೆ.

- Advertisement -

2018 ನವೆಂಬರ್ 24 ರಂದು ಇಸ್ರೋದ ಅಧ್ಯಕ್ಷ, ಪದ್ಮಶ್ರೀ ಎ ಎಸ್ ಕಿರಣ್ ಕುಮಾರ್ ಅವರು ದಾರವಾಡದಲ್ಲಿ ನಡೆದ ವಿಜ್ಞಾನ ತಂತ್ರಜ್ಞಾನ ಸಮ್ಮೇಳನದ ಅಧ್ಯಕ್ಷತೆ ವಹಿಸಿ “ಇಂದು ಭಾರತವು ರಾಕೆಟ್ ತಂತ್ರಜ್ಞಾನದಲ್ಲಿ ಜಗತ್ತಿನ ಮುಂದುವರೆದ ರಾಷ್ಟ್ರಗಳಿಗೆ ಸರಿಸಮಾನಾಗಿ ನಿಲ್ಲಲು ಟಿಪ್ಪು ಸುಲ್ತಾನ್ ಮೂಲ ಕಾರಣ. ಟಿಪ್ಪು ಯುದ್ದಕ್ಕೆ ಬಳಸಿದ ರಾಕೆಟ್ ತಂತ್ರಜ್ಞಾನವನ್ನೇ ಅಭಿವೃದ್ದಿಪಡಿಸಿ ಪಾಶ್ಚಾತ್ಯರು ಉಪಗ್ರಹ ಮತ್ತು ಮಾನವನನ್ನು ಬಾಹ್ಯಾಕಾಶಕ್ಕೆ ಕಳಿಸಿದರು. ನಮ್ಮ ಟಿಪ್ಪುವಿನಿಂದಾಗಿಯೇ ರಾಕೆಟ್ ವಿಜ್ಞಾನ ತಂತ್ರಜ್ಞಾನ ಜಗತ್ತಿನಲ್ಲಿ ಬೆಳೆದಿದೆ” ಎಂದಿದ್ದರು.

ಟಿಪ್ಪುವನ್ನು ವಿರೋಧಿಸುವವರೇ ಚಂದ್ರಗ್ರಹಣ, ಚಂದ್ರನನ್ನು ಸೂರ್ಯ ನುಂಗುತ್ತಾನೆ, ಗಣೇಶ ಚತುರ್ಥಿ ದಿನ ಚಂದ್ರನನ್ನು ನೋಡಬಾರದು ಎಂಬ ನಂಬುವವರಾಗಿದ್ದಾರೆ. ಟಿಪ್ಪು ವಿರೋಧ ಮತ್ತು ಚಂದ್ರನ ಕುರಿತಾದ ಮೌಡ್ಯಗಳ ಪ್ರತಿಪಾದನೆ ಮಾಡುವವರು ಚಂದ್ರಯಾನ ಯಶಸ್ಸನ್ನು ಸಂಭ್ರಮಿಸುವುದು ವಿರೋಧಾಭಾಸವಾಗುತ್ತದೆ. ಚಂದ್ರಯಾನ ಯಶಸ್ಸು ಸಂಭ್ರಮಿಸುವವರು ಟಿಪ್ಪು ವಿರೋಧವೋ, ಚಂದ್ರಯಾನವೋ ಎಂದು ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು.



Join Whatsapp