ಬೆಂಗಳೂರು: ಟಿಪ್ಪು ಎಂದರೆ ಧೈರ್ಯ, ಹೊಸತನ, ಪ್ರೀತಿ, ಏಕತೆ, ದೇಶಭಕ್ತಿ ಎಂದು ಎಸ್ ಡಿಪಿಐ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೈಸೂರು ಹುಲಿ ಖ್ಯಾತಿಯನ್ನ ಪಡೆದಿರೋ ಉಪಖಂಡದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧದ ಹೋರಾಟದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿ ಭಾರತಕ್ಕೆ ಬ್ರಿಟಿಷರ ಬೆದರಿಕೆಯನ್ನು ಗುರುತಿಸಿದ ಏಕೈಕ ಭಾರತೀಯ ಆಡಳಿತಗಾರ. ಬ್ರಿಟಿಷರೊಂದಿಗೆ ಕೊನೆಯುಸಿರಿರುವರೆಗೂ ಹೋರಾಟ ಮಾಡಿದ ಸ್ವಾತಂತ್ರ್ಯ ಸೇನಾನಿ. ಕನ್ನಡ ನಾಡನ್ನು ದೇಶದ ಎತ್ತರಕ್ಕೆ ಕೊಂಡೊಯ್ದ ಮಹಾನ್ ನಾಯಕ. ಅಪ್ಪಟ ಕನ್ನಡ ಪ್ರೇಮಿ ಮತ್ತು ಭಾವೈಕ್ಯದ ಪ್ರತೀಕವಾಗಿದ್ದವರು. ತಮ್ಮ ಆಡಳಿತಾವಧಿಯಲ್ಲಿ ರಾಜ್ಯದ ಎಲ್ಲ ಲೆಕ್ಕ ಪತ್ರಗಳನ್ನು ಕನ್ನಡ ಭಾಷೆಯಲ್ಲಿ ವ್ಯವಹಾರ ಮಾಡಿ ಕನ್ನಡ ಭಾಷೆ ಆಡಳಿತವೆಂದು ಕನ್ನಡಾಭಿಮಾನ ತೋರಿಸಿದ ಒಬ್ಬ ಧೀಮಂತ ನಾಯಕ. ವ್ಯಾಪಾರ, ಆಡಳಿತ, ಅಭಿವದ್ಧಿ, ಸಂಸ್ಕೃತಿ ಮತ್ತು ಕಲೆಯಲ್ಲಿ ಎಲ್ಲರನ್ನು ಪ್ರೋತ್ಸಾಹಿಸುವ ಸದ್ಗುಣಗಳು ಅವರಲ್ಲಿದ್ದವು. ತನ್ನ ಪ್ರಾಣವನ್ನು ಮುಡುಪಾಗಿಟ್ಟು ನಾಡ ರಕ್ಷಣೆ ಮಾಡಿದ ವೀರ ಕನ್ನಡಿಗ ಟಿಪ್ಪು ಸುಲ್ತಾನ್.
ಇಂತಹ ಮಹಾನ್ ನಾಯಕರ ಆದರ್ಶ ಹಾಗೂ ಧೈರ್ಯ ಇಂದಿನ ಯುವ ಪೀಳಿಗೆಯಲ್ಲಿ ಅವಶ್ಯಕವಾಗಿದೆ. ಅವರ ತ್ಯಾಗ ಮತ್ತು ಬಲಿದಾನ ದೇಶಕ್ಕೆ ಮಾದರಿಯಾಗಿದೆ ಮತ್ತು ಎಲ್ಲರಿಗೂ ಆದರ್ಶ ಪ್ರಾಯವಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ಸರ್ಕಾರ ಕೊಟ್ಟ ಭರವಸೆಯಂತೆ ಟಿಪ್ಪು ವಿಶ್ವವಿದ್ಯಾಲಯ ಸ್ಥಾಪಿಸಲು ಆಗ್ರಹಿಸುತ್ತೇನೆ ಎಂದು ಬರೆದಿದ್ದಾರೆ.