ಟೈಮರ್ ಪ್ರಮಾದ | ಭಾರತ ಮಹಿಳಾ ಹಾಕಿ ತಂಡದ ಚಿನ್ನದ ಕನಸು ಭಗ್ನ

Prasthutha: August 6, 2022

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದ ಮಹಿಳಾ ಹಾಕಿ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಭಾರತದ ಕನಸು ಭಗ್ನಗೊಂಡಿದೆ. ಶುಕ್ರವಾರ ರಾತ್ರಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಸವಿತಾ ಪೂನಿಯಾ ನೇತೃತ್ವದ ಭಾರತ ತಂಡ, ನಾಲ್ಕು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 0–3 ಅಂತರದಲ್ಲಿ ಸೋಲನುಭವಿಸಿತು.

ಸೆಮಿಫೈನಲ್‌ ಪಂದ್ಯ ಪೂರ್ಣಾವಧಿಯ ವೇಳೆಗೆ 1-1 ಅಂತರದಲ್ಲಿ ಸಮಬಲಗೊಂಡಿತ್ತು. ಹೀಗಾಗಿ ವಿಜೇತರನ್ನು ನಿರ್ಣಯಿಸಲು ನೀಡಲಾದ ಶೂಟೌಟ್‌ನಲ್ಲಿ ಭಾರತ ವನಿತೆಯರು ಗೋಲು ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ. ಎದುರಾಳಿ ಆಸ್ಟ್ರೇಲಿಯಾ ಮೂರೂ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿತು. ಆ ಮೂಲಕ ಚಿನ್ನ ಅಥವಾ ಬೆಳ್ಳಿ ಪದಕ ಸುತ್ತಿನ ಪಂದ್ಯದಿಂದ ಭಾರತ ಹೊರನಡೆದಿದೆ. ಕಂಚಿನ ಪದಕಕ್ಕಾಗಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ತಂಡದ ವಿರುದ್ಧ ಸೆಣಸಾಡಲಿದೆ.

ಮತ್ತೊಂದೆಡೆ ಚಿನ್ನದ ಪದಕಕ್ಕಾಗಿ ನಡೆಯುವ ಫೈನಲ್‌ ಪೈಪೋಟಿಯಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್‌ ತಂಡದ ಸವಾಲನ್ನು ಎದುರಿಸಲಿದೆ. ನ್ಯೂಜಿಲೆಂಡ್ ತಂಡವನ್ನು 2–0 ಅಂತರದಿಂದ ಮಣಿಸುವ ಮೂಲಕ ಇಂಗ್ಲೆಂಡ್‌ ಫೈನಲ್‌ ಪ್ರವೇಶಿಸಿದೆ.‌

ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭಾರತ ದಿಟ್ಟತನದ ಆಟ ಪ್ರದರ್ಶಿಸಿದರಾದರೂ ಗೋಲು ಗಳಿಸಲು ಯಶಸ್ವಿಯಾಗಲಿಲ್ಲ. ಆರಂಭದಲ್ಲಿ ಆಕ್ರಮಣಕಾರಿಯಾಗಿ ಆಡಿದ ಭಾರತ ತಂಡಕ್ಕೆ 8ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತ್ತು. ಗುರ್ಜಿತ್ ಕೌರ್ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾದರು.

10ನೇ ನಿಮಿಷದಲ್ಲಿ ಆಸ್ಟ್ರೇಲಿಯಾದ ರೆಬೆಕಾ ಗ್ರೀನರ್ ಅವರು ಸವಿತಾ ಪೂನಿಯಾರ ತಡೆಗೋಡೆಯನ್ನು ಭೇದಿಸಿ ಗೋಲು ಗಳಿಸಿದರು. ಆಸ್ಟ್ರೇಲಿಯಾದ ಮುನ್ನಡೆ ಭಾರತವನ್ನು ಒತ್ತಡಕ್ಕೆ ದೂಡಿತು. ಪಂದ್ಯದ ಎರಡನೇ ಅವಧಿಯ ಮುಕ್ತಾಯಕ್ಕೆ 4 ನಿಮಿಷ ಬಾಕಿಯಿದ್ದ ವೇಳೆ ಭಾರತದ ಸುಶೀಲಾ ಚಾನು ನೀಡಿದ ಪಾಸ್ ಅನ್ನು ಕಟಾರಿಯಾ ಗೋಲಾಗಿ ಪರಿವರ್ತಿಸಿದರು. ಆ ಮೂಲಕ ಪಂದ್ಯ 1-1 ರಲ್ಲಿ ಸಮಬಲಗೊಂಡಿತು.

ಶೂಟೌಟ್ ವಿವಾದ: ಪೆನಾಲ್ಟಿ ಶೂಟೌಟ್​ನಲ್ಲಿ ವಿವಾದ ಉಂಟಾಯಿತು. ಆಸ್ಟ್ರೇಲಿಯಾದ ಆಂಬ್ರೋಸಿಯಾ ಮಲೋನ್ ಮೊದಲ ಪೆನಾಲ್ಟಿ ಅವಕಾಶ ಪಡೆದು ಚೆಂಡನ್ನು ಗೋಲಿನೆಡೆಗೆ ದೂಡಿದಾಗ ಅದನ್ನು ಗೋಲ್​ಕೀಪರ್​ ಸವಿತಾ ಯಶಸ್ವಿಯಾಗಿ ತಡೆದರು. ಆದರೆ, ಟೈಮರ್​ ಆರಂಭವಾಗದ ಕಾರಣ ಮತ್ತೊಂದು ಅವಕಾಶ ನೀಡಲಾಯಿತು. ಈ ವೇಳೆ, ಮಲೋನ್ ಅದನ್ನು ಗೋಲಾಗಿ ಪರಿವರ್ತಿಸಿದರು. ಇದು ವಿವಾದಕ್ಕೆ ಕಾರಣವಾಯಿತು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ