ಬೆಂಗಳೂರು: ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ (HSRP) ನಂಬರ್ ಪ್ಲೇಟ್ ಅಳವಡಿಸದ ವಾಹನ ಸವಾರರಿಗೆ ಸರಕಾರ ಸಿಹಿಸುದ್ದಿ ನೀಡಿದ್ದು, ಜೂನ್ 12 ರವರೆಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಕಾಲಾವಕಾಶ ನೀಡಿದೆ.
ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಇರುವ ಮೇ 31ರ ಗಡುವು ವಿಸ್ತರಣೆ ಕೋರಿ BND ಎನರ್ಜಿ ಲಿಮಿಟೆಡ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ಮುಂದೆ ಈ ರಿಟ್ ಅರ್ಜಿ ವಿಚಾರಣೆಗೆ ಬಂದಿದೆ.
ಆದರೆ, ಹಲವು ರಿಟ್ ಅರ್ಜಿಗಳ ವಿಚಾರಣೆ ಜೂನ್ 11ಕ್ಕೆ ನಿಗದಿಯಾಗಿದೆ. ಹೀಗಾಗಿ ಹೀಗಾಗಿ ಜೂನ್ 12 ರವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರದ ಪರವಾಗಿ ಎಎಜಿ ರೂಬೆನ್ ಜೇಕಬ್ ಅವರು ಹೈಕೋರ್ಟ್ಗೆ ಹೇಳಿದ್ದಾರೆ. ಎಎಜಿ ರೂಬೆನ್ ಜೇಕಬ್ ಅವರ ಈ ಹೇಳಿಕೆಯನ್ನು ದಾಖಲಿಸಿಕೊಂಡ ಹೈಕೋರ್ಟ್ ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿದೆ.
ರಾಜ್ಯದಲ್ಲಿ 2019 ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಿರುವ ಸುಮಾರು 2 ಕೋಟಿ ದ್ವಿಚಕ್ರ, ತ್ರಿಚಕ್ರ, ಲಘು ಮೋಟಾರು ವಾಹನ, ಪ್ರಯಾಣಿಕ ಕಾರುಗಳು, ಮಧ್ಯಮ, ಭಾರಿ ವಾಣಿಜ್ಯ ವಾಹನ, ಟ್ರೈಲರ್, ಟ್ರ್ಯಾಕ್ಟರ್‌ಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ.