ಬೆಂಗಳೂರು: ಭ್ರಷ್ಟಾಚಾರ, ಅಕ್ರಮ ನೇಮಕಾತಿ ವಿಚಾರದಲ್ಲಿ ವಿರೋಧ ಪಕ್ಷಗಳು ಬಿಜೆಪಿ ವಿರುದ್ದ ತಿರುಗಿ ಬೀಳುತ್ತಿದ್ದರೆ, ಬಿಜೆಪಿ ಸದ್ದಿಲ್ಲದೇ ಬೇರೆ ಪಕ್ಷದ ನಾಯಕರನ್ನು ತನ್ನತ್ತ ಸೆಳೆಯುತ್ತಿದೆ.
ಜೆಡಿಎಸ್ ಪ್ರಾಬಲ್ಯವಿರುವ ಮಂಡ್ಯ ಮತ್ತು ಕೋಲಾರ ವಿಭಾಗದ ನಾಲ್ವರು ಮುಖಂಡರು ಇಂದು ಬಿಜೆಪಿ ಸೇರುವ ಮಹೂರ್ತ ಫಿಕ್ಸ್ ಆಗಿದ್ದು, ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ.
ಆದರೆ, ವ್ಯತಿರಿಕ್ತವೆಂಬಂತೆ ಕೋಲಾರ ಜಿಲ್ಲೆಯ ಇಬ್ಬರು ನಾಯಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುತ್ತಿರುವುದಕ್ಕೆ ಅಲ್ಲಿನ ಸ್ಥಳೀಯ ಬಿಜೆಪಿ ನಾಯಕರೇ ತೀವ್ರ ಪ್ರತಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಸ್ಥಳೀಯ ನಾಯಕರ ದೊಡ್ಡ ದಂಡು ಬಿಜೆಪಿ ಪ್ರಮುಖರನ್ನು ಭೇಟಿಯಾಗಿ ಸೇರಿಸಿಕೊಳ್ಳದಂತೆ ಎಚ್ಚರಿಸಿದೆ. ಆದರೂ, ಪಕ್ಷ ಸೇರ್ಪಡೆ ಕಾರ್ಯಕ್ರಮ ನಿಗದಿಯಾಗಿದೆ.
ಬಿಜೆಪಿಯ ಪ್ರಭಾವ ಕಡಿಮೆಯಿರುವ ಪ್ರದೇಶಗಳಲ್ಲಿ ಪಕ್ಷ ಬಲವರ್ಧನೆಗೆ ಗಮನ ಕೊಡಿ ಎನ್ನುವ ವರಿಷ್ಠರ ಫರ್ಮಾನಿಗೆ ರಾಜ್ಯ ನಾಯಕರು ಅಸಡ್ಡೆ ತೋರಿರುವುದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಿಟ್ಟಿಗೆ ಕಾರಣವಾಗಿದೆ ಎನ್ನುವ ಮಾತಿದೆ. ಈ ಕಾರಣಕ್ಕಾಗಿಯೇ ಅಮಿತ್ ಶಾ, ಬೆಂಗಳೂರು ಭೇಟಿಯ ವೇಳೆ ಕಾರ್ಯಕರ್ತರು ಮತ್ತು ಮುಖಂಡರನ್ನು ಭೇಟಿಯಾಗಿರಲಿಲ್ಲ ಎಂದು ಹೇಳಲಾಗುತ್ತಿದೆ.