ಮಡಿಕೇರಿ: ಹಾಡಹಗಲೇ ಹುಲಿ ಗಬ್ಬ ಧರಿಸಿದ ಹಸುವೊಂದರ ಮೇಲೆ ದಾಳಿ ನಡೆಸಿ ಸಾಯಿಸಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಬಾಡಗಬಾಣಂಗಾಲ ಗ್ರಾಮದ ಮಾರ್ಗೊಲ್ಲಿಯಲ್ಲಿ ನಡೆದಿದೆ.
ಕಳೆದೆರಡು ದಿನಗಳ ಹಿಂದೆಯಷ್ಟೇ ಕಾಫಿ ತೋಟದ ಒಳಗೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಬೃಹತ್ ಗಾತ್ರದ ಹುಲಿಯ ಚಿತ್ರ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖಾಧಿಕಾರಿಗಳು ಕಳೆದೆರಡು ದಿನಗಳಿಂದ ಕೂಬಿಂಗ್ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾರ್ಗೊಲ್ಲಿಯ ಹಳೆಯ ಶಾಲೆಯ ಸಮೀಪದಲ್ಲಿ ಹಾಡಹಗಲೇ ಮೇಯಲು ಬಿಟ್ಟಿದ್ದ ಗಬ್ಬದ ಹಸುವಿನ ಮೇಲೆ ದನ ಮೇಯಿಸುತ್ತಿದ್ದ ಕಾರ್ಮಿಕನ ಎದುರಿನಲ್ಲೇ ಹುಲಿಯು ದಾಳಿ ನಡೆಸಿ ಸಾಯಿಸಿರುವುದು ಆತಂಕ ಸೃಷ್ಟಿಸಿದೆ.
ಮಾರ್ಗೊಲ್ಲಿ ಕಾಫಿ ತೋಟದ ಚಾಲಕರಾದ ಪೂವಪ್ಪ ಎಂಬವರಿಗೆ ಸೇರಿದ ಗಬ್ಬದ ಹಸು ಹಾಗೂ ಅಲ್ಲಿನ ಸಿಬ್ಬಂದಿಯ ಮತ್ತೊಂದು ಜಾನುವಾರನ್ನು ದನ ಕಾಯುವ ಕಾರ್ಮಿಕ ಸಾರಲಿ ಶೇಕ್ ಎಂಬಾತ ಎಂದಿನಂತೆ ಮಾರ್ಗೊಲ್ಲಿ ಹಳೆಯ ಶಾಲೆಯ ಬಳಿ ಇರುವ ಗದ್ದೆಗೆ ಮೇಯಿಸಲು ಕರೆದುಕೊಂಡು ಹೋಗುತ್ತಿದ್ದರು. ಶನಿವಾರದಂದು ಜಾನುವಾರುಗಳನ್ನು ಗದ್ದೆಯಲ್ಲಿ ಮೇಯಿಸುತ್ತಿದ್ದ ಸಂದರ್ಭದಲ್ಲಿ ಗದ್ದೆಯ ಸಮೀಪದಲ್ಲಿದ್ದ ಪೊದೆಯೊಂದರಿಂದ ಹಠಾತ್ತನೆ ಹುಲಿಯೊಂದು ದನ ಕಾಯುವ ಕಾರ್ಮಿಕನ ಎದುರಿನಲ್ಲಿ ಗಬ್ಬದ ಹಸುವಿನ ಮೇಲೆ ದಾಳಿ ನಡೆಸಿದೆ. ಅದೃಷ್ಟವಶಾತ್ ಕಾರ್ಮಿಕನು ಪ್ರಾಣಾಪಾಯದಿಂದ ಕೂದಲೆಳೆಯ ಅಂತರದಿಂದ ಪಾರಾಗಿದ್ದಾನೆ ಎನ್ನಲಾಗಿದೆ. ಹಸುವಿನ ಮೇಲೆ ದಾಳಿ ನಡೆಸಿದ ಹುಲಿ ಕುತ್ತಿಗೆ ಭಾಗದಲ್ಲಿ ಕಚ್ಚಿ ಗಾಯಗೊಳಿದೆ. ಇದೇ ಸಂದರ್ಭದಲ್ಲಿ ದನ ಮೇಯಿಸುತ್ತಿದ್ದ ಸಾರಲಿ ಶೇಕ್ ಭಯಗೊಂಡು ಕಿರುಚಿದಾಗ ಹುಲಿಯು ಅಲ್ಲಿಂದ ಕಾಲ್ಕಿತ್ತಿದೆ. ಹಾಡಹಗಲೇ ಹುಲಿ ದಾಳಿ ನಡೆಸಿ ಸಾಯಿಸಿರುವ ಘಟನೆಯ ವಿಚಾರ ತಿಳಿದು ಗ್ರಾಮಸ್ಥರು ಹಾಗೂ ಕಾರ್ಮಿಕರು ಭಯಭೀತರಾಗಿದ್ದಾರೆ. ಇದೀಗ ಹುಲಿಯು ಹಸುವನ್ನು ಸಾಯಿಸಿರುವುದರಿಂದ ಹುಲಿಯ ಸಂಚಾರವು ಇರುವುದು ಮತ್ತೊಮ್ಮೆ ಸಾಬೀತುಪಡಿಸಿದಂತಾಗಿದೆ.
ಹುಲಿಯನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೂರ್ತಿ ಅವರ ಮಾರ್ಗದರ್ಶನದಲ್ಲಿ ಅರಣ್ಯ ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆಯಲ್ಲಿದ್ದಾರೆ. ಹುಲಿಯು ಕಾಡು ದನವನ್ನು ಕೊಂದಿದ್ದ ಸ್ಥಳದ ಬಳಿ ವೀಕ್ಷಣ ಗೋಪುರ ನಿರ್ಮಿಸಲಾಗಿದೆ. ಕಳೆದೆರಡು ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾಲ್ನಡಿಗೆಯಲ್ಲಿ ಮಳೆಯ ನಡುವೆ ಕಾಫಿ ತೋಟದ ಒಳಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಪ್ಪತ್ತಕ್ಕೂ ಅಧಿಕ ಮಂದಿ ಶನಿವಾರದಂದು ಬೆಳಗ್ಗಿನಿಂದಲೇ ಮಾಲ್ದಾರೆ ವ್ಯಾಪ್ತಿಯ ಬಾಡಗಬಾಣಂಗಾಲ, ಮಾರ್ಗೊಲ್ಲಿ ಹಾಗೂ ಬಿಬಿಟಿಸಿ ಸಂಸ್ಥೆಗೆ ಸೇರಿದ ಕಾಫಿ ತೋಟದ ಒಳಗೆ ಸುತ್ತಾಡಿದರು. ಅಲ್ಲದೇ ಹುಲಿಯನ್ನು ಸೆರೆ ಹಿಡಿಯಲು ಕಾಫಿ ತೋಟದ ಒಳಗೆ ಮೂರು ಬೋನ್ ಗಳನ್ನು ಇರಿಸಲಾಗಿದ್ದು, ಬೋನ್ ಗಳ ಒಳಗೆ ಹಂದಿಗಳನ್ನು ಇಡಲಾಗಿದೆ. ಬೋನ್ ಗಳನ್ನು ಸೊಪ್ಪುಗಳಿಂದ ಮುಚ್ಚಿಟ್ಟು ಹುಲಿಯ ಸೆರೆಗೆ ತಂತ್ರ ರೂಪಿಸಿದ್ದಾರೆ. ಹುಲಿಯ ಚಲನ ವಲನ ಕಂಡು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ತಿಳಿಸಿದ್ದಾರೆ. ಬಾಡಗಬಾಣಂಗಾಲ ಮಾಲ್ದಾರೆ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿರುವುದರಿಂದ ಹುಲಿಯ ಕಾರ್ಯಾಚರಣೆಗೆ ಅಡಚಣೆ ಉಂಟಾಗುತ್ತಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಕಳೆದ 3 ದಿನಗಳ ಹಿಂದೆ ಅಷ್ಟೇ ಪಾಲಿಬೆಟ್ಟದ ಖಾಸಗಿ ಕಾಫಿ ತೋಟಗಳಲ್ಲಿ ಕಾಡು ದನವೊಂದನ್ನು ಹುಲಿಯು ಸಾಯಿಸಿತ್ತು. ಇದಲ್ಲದೇ ಆಗಿಂದಾಗ್ಗೆ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡು ದನಗಳನ್ನು ಬೇಟೆಯಾಡಿ ಸಾಯಿಸುತ್ತಿರುವ ಘಟನೆಗಳು ನಡೆಯುತ್ತಿವೆ. ಹುಲಿಯನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಅರವಳಿಕೆ ಔಷಧಿಗಳನ್ನು ತರಿಸಲಾಗಿದೆ. ಅಲ್ಲದೇ ಎಲ್ಲಾ ಸಿದ್ಧತೆಗಳನ್ನು ಅರಣ್ಯ ಅಧಿಕಾರಿಗಳು ಕೈಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಾಧಿಕಾರಿ ಮೂರ್ತಿ ಅವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ತಾಲ್ಲೂಕು ಡಿಸಿಎಫ್ ಚಕ್ರಪಾಣಿ, ಎಸಿಎಫ್ ಉತ್ತಪ್ಪ, ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಹುನಗುಂದ, ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಮ್, ಉಪ ವಲಯ ಅರಣ್ಯಾಧಿಕಾರಿಗಳಾದ ಶ್ರೀನಿವಾಸ್, ಕನ್ನಂಡ ರಂಜಿತ್, ಮೈಸೂರಿನ ಮೃಗಾಲಯದ ಡಾ. ಪ್ರಶಾಂತ್, ಕುಶಾಲನಗರದ ಡಾ.ಚಿಟ್ಟಿಯಪ್ಪ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಶನಿವಾರದಂದು ಹುಲಿ ಧಾಳಿ ನಡೆಸಿ ಹಸುವನ್ನು ಸಾಯಿಸಿದ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.