ಮಂಗಳೂರು: ಸಿಡಿಲು ಬಡಿದು ಮೂವರು ಮಕ್ಕಳು ಅಸ್ವಸ್ಥ

Prasthutha|

ಮಂಗಳೂರು: ಮನೆ ಸಮೀಪದ ವಿದ್ಯುತ್ ಕಂಬಕ್ಕೆ ಸಿಡಿಲು ಬಡಿದ ಪರಿಣಾಮ ಸಮೀಪದ ಮನೆಯಲ್ಲಿದ್ದ ಮೂವರು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಶನಿವಾರ ಸಂಜೆ ಇಲ್ಲಿನ ವಾಮಂಜೂರು ಎಂಬಲ್ಲಿ ನಡೆದಿದೆ.

- Advertisement -


ವಾಮಂಜೂರು ಸಂತೋಷ್ ನಗರ ನಿವಾಸಿ ಅಬ್ದುಲ್ ಖಾದರ್ ಸಅದಿ ಎಂಬವರ ಮಕ್ಕಳಾದ ಅಮ್ರೀನಾ (18), ಆದಿಲ್ (13) ಹಾಗೂ ಅನಸ್ (10) ಅವರು ಸಿಡಿಲಿನ ಶಬ್ಧಕ್ಕೆ ಅಸ್ವಸ್ಥಗೊಂಡಿದ್ದರು. ತಕ್ಷಣ ಸ್ಥಳೀಯ ಯುವಕರು ಮಂಗಳೂರಿನ ಕಂಕನಾಡಿ ಆಸ್ಪತ್ರೆಗೆ ಮೂವರನ್ನು ಕರೆ ತಂದಿದ್ದಾರೆ. ಆದರೆ ಕಂಕನಾಡಿ ಆಸ್ಪತ್ರೆಯವರು ಹೈಲ್ಯಾಂಡ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಬಳಿಕ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಯಿತು.


ಚಿಕಿತ್ಸೆಯ ಬಳಿಕ ಮೂವರು ಮಕ್ಕಳಿಗೆ ಪ್ರಜ್ಞೆ ಮರಳಿದ್ದು, ಆಘಾತದಿಂದ ಹೊರಬಂದಿದ್ದಾರೆ. ವೈದ್ಯಕೀಯ ಪರೀಕ್ಷೆಯ ಬಳಿಕ ನಾಳೆ ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ.
ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಭಾರಿ ಮಳೆಯಾಗುತ್ತಿತ್ತು. ಈ ವೇಳೆ ಮನೆ ಸಮೀಪದ ವಿದ್ಯುತ್ ಕಂಬಕ್ಕೆ ಸಿಡಿಲು ಬಡಿದು ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Join Whatsapp