ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಆರೋಪ: ಮೂವರು ವಿದ್ಯಾರ್ಥಿಗಳು ಕಾಲೇಜಿನಿಂದ ಸಸ್ಪೆಂಡ್

Prasthutha|

ಬೆಂಗಳೂರು: ಮಾರತ್ತಹಳ್ಳಿಯ ಕಾಲೇಜೊಂದರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ ಎನ್ನಲಾದ ಆರೋಪದಲ್ಲಿ  ಮೂವರು ವಿದ್ಯಾರ್ಥಿಗಳನ್ನು ಮಾರತ್ತಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ

- Advertisement -

ಮಾರತ್ತಹಳ್ಳಿಯ ನ್ಯೂ ಹಾರಿಜನ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೆಲ ವಿದ್ಯಾರ್ಥಿಗಳು ಕೂಗಾಡಿದ್ದಾರೆ ಎಂಬ ಆರೋಪದಲ್ಲಿ ಘಟನೆಯ ಬಗ್ಗೆ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎನ್ನಲಾದ ವಿಡಿಯೋದಲ್ಲಿರುವ ಆರೋಪಿಗಳಾದ ಪಂಜಾಬ್ ಮೂಲದ ಆರ್ಯನ್, ರಿಯಾ ರವಿಚಂದ್ರ, ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ವಿಚಾರಣೆ ನಡೆಸಲಾಗಿದೆ.

- Advertisement -

ಪ್ರಕರಣವನ್ನು ಮಾರತ್ತಹಳ್ಳಿ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಎಸಿಪಿ ಕಿಶೋರ್ ಭರಣಿ ನೇತೃತ್ವದಲ್ಲಿ ನಿನ್ನೆ ತಡರಾತ್ರಿ 10 ಗಂಟೆವರೆಗೂ ಆರೋಪಿಗಳ ವಿಚಾರಣೆ ನಡೆಸಲಾಗಿದೆ.

ವಿಚಾರಣೆ ವೇಳೆ ವಿದ್ಯಾರ್ಥಿಗಳು ತಮಾಷೆಗಾಗಿ ಪಾಕ್ ಪರ ಘೋಷಣೆ ಕೂಗಿದ್ದೇವೆ ಎಂದಿದ್ದಾರೆ. ಅವರಿಂದ ಜಪ್ತಿ ಮಾಡಿರುವ ಮೊಬೈಲ್ ಪರಿಶೀಲನೆ ನಡೆಸಲಾಗಿದ್ದು ಈ ವಿದ್ಯಾರ್ಥಿಗಳು ದೇಶ ವಿರೋಧಿ ಚಟುವಟಿಕೆಗಳಲ್ಲಿ ನಿರತರಾಗಿರುವವರ ಸಂಪರ್ಕದಲ್ಲಿದ್ದಾರಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಯಾವುದಾದರು ಸಂಘಟನೆಯ ನಂಟು ಈ ವಿದ್ಯಾರ್ಥಿಗಳಿಗೆ ಇದೆಯಾ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಈ ವಿದ್ಯಾರ್ಥಿಗಳು ಯಾವುದೇ ಸಂಘಟನೆಗಳ ನಂಟು ಹೊಂದಿಲ್ಲ ಎಂದು ಕಂಡು ಬರುತ್ತಿದೆ. ಮತ್ತೆ ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳಿಗೆ ಪೊಲೀಸರು ಸೂಚನೆ ನೀಡಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಮೂವರನ್ನೂ ಕಾಲೇಜು ಆಡಳಿತ ಮಂಡಳಿ ನವಂಬರ್ 30ರ ವರೆಗೂ ಸಸ್ಪೆಂಡ್ ಮಾಡಿದೆ.

ಈ ವಿದ್ಯಾರ್ಥಿಗಳು ಇದೇ ವರ್ಷ ಕಾಲೇಜು ಸೇರಿದ್ದರು. ಇವರು ಮೊದಲ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಆರ್ಯನ್ ಮೊದಲ ವರ್ಷ ಮೆಕ್ಯಾನಿಕಲ್ ಎಂಜಿನಿಯರ್(ಎಂಇ) ವಿದ್ಯಾರ್ಥಿ. ವಿದ್ಯಾರ್ಥಿನಿ ರಿಯಾ ಮತ್ತು ಮತ್ತೊಬ್ಬ ಆರೋಪಿ ಇನ್ಫಾರ್ಮೇಶನ್ ಸೈನ್ಸ್ನ(ಐಎಸ್) ವಿದ್ಯಾರ್ಥಿಗಳಾಗಿದ್ದಾರೆ.

ವಿಚಾರಣೆ ವೇಳೆ ರಿಯಾ ಪೋಷಕರು ಎಸಿಪಿ ಕಿಶೋರ್ ಭರಣಿ ಎದುರು ಕಣ್ಣೀರು ಹಾಕಿದ್ದಾರೆ. ‘ಇರುವುದು ಒಬ್ಬಳೇ ಮಗಳು. ಹೀಗೆಲ್ಲಾ ಮಾಡುತ್ತಾಳೆ ಎಂದು ಅಂದುಕೊಂಡಿರಲಿಲ್ಲ. ದಯವಿಟ್ಟು ನಮ್ಮನ್ನ ಕ್ಷಮಿಸಿ ಸರ್’ ಎಂದು ಗೋಳಾಡಿದ್ದಾರೆ,

ಕಾಲೇಜಿನಲ್ಲಿ ಇದೇ ತಿಂಗಳ 25 ಮತ್ತು 26 ರಂದು ಫೆಸ್ಟ್ ಇದೆ. ಅದಕ್ಕಾಗಿ ಸಿದ್ಧತೆ ವಿದ್ಯಾರ್ಥಿಗಳು ಮಾಡಿಕೊಳ್ಳುತ್ತಿದ್ದರು. ಹಾಗಾಗಿ ನ.17 ರ ಸಂಜೆ ಒಟ್ಟಿಗೆ ಸೇರಿದ್ದಾರೆ. ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಮಾತುಕತೆ ನಡೆಸುತ್ತಿದ್ದಾಗ ಈ ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಹಾಕಿದ್ದಾರೆ ಎನ್ನಲಾಗಿದೆ.

ಈ ಸಂದರ್ಭ ಇತರೆ ವಿದ್ಯಾರ್ಥಿಗಳು ಮಾತುಕತೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿಕೊಳ್ಳುತ್ತಾ ಇದ್ದರು. ಆಗ ಪಾಕ್ ಪರ ಘೋಷಣೆ ಕೂಗಿದ್ದು ಕೂಡ ಮೊಬೈಲ್ ನಲ್ಲಿ ಸೆರೆಯಾಗಿದೆ. ಅದೇ ವಿಡಿಯೋ ಕ್ಲಿಪ್ ಅನ್ನು ಕಾಲೇಜು ವಿದ್ಯಾರ್ಥಿಗಳ ತಮ್ಮ ಗ್ರೂಪ್ಗಳಲ್ಲಿ ಶೇರ್ ಮಾಡಿಕೊಂಡಿದ್ದರು. ಅದನ್ನು ನೋಡಿದ ಇತರೆ ವಿದ್ಯಾರ್ಥಿಗಳೂ ಘೋಷಣೆ ಕೂಗಿದ್ದವರ ಮೇಲೆ ಹಲ್ಲೆಗೂ ಮುಂದಾಗಿದ್ದರು. ಈ ಘಟನೆಯ ನಂತರ ಆರೋಪಿಗಳು ಕ್ಷಮೆ ಕೇಳಿದ್ದರು ಎನ್ನಲಾಗಿದೆ. ಈ ಘಟನೆಯ ನಂತರ ಕಾಲೇಜು ಆಡಳಿತ ಮಂಡಳಿ ಅವರನ್ನು ಸಸ್ಪೆಂಡ್ ಮಾಡಿ ಮಾರತ್ತಹಳ್ಳಿ ಠಾಣೆಗೆ ಬಂದು ದೂರು ದಾಖಲಿಸಿದೆ.



Join Whatsapp