ಪ್ರಸಕ್ತ ಸಾಲಿನಲ್ಲಿ ಮೂರು ಲಕ್ಷ ಮನೆ ನಿರ್ಮಾಣ ಗುರಿ: ಬಜೆಟ್ ನಲ್ಲಿ ಮುಖ್ಯಮಂತ್ರಿ ಘೋಷಣೆ

Prasthutha|

ಬೆಂಗಳೂರು: ಮನೆ ಹೊಂದಿಲ್ಲದ ಸರ್ವರಿಗೂ ಸೂರು ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. 2021-22ನೇ ಸಾಲಿನಲ್ಲಿ 2.96 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಮೂರು ಲಕ್ಷ ಮನೆಗಳನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಇದಲ್ಲದೇ, ಇತ್ತೀಚೆಗೆ ನಮ್ಮ ಸರ್ಕಾರವು ಒಟ್ಟು ಐದು ಲಕ್ಷ ಹೊಸ ಮನೆಗಳ ಗುರಿಯನ್ನು 6,612 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮಂಜೂರು ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ.

- Advertisement -

ವಿಧಾನಸಭೆಯಲ್ಲಿ ಬಜೆಟ್ ಭಾಷಣ ಮಾಡಿದ ಅವರು,  ಮುಖ್ಯಮಂತ್ರಿಗಳ ಒಂದು ಲಕ್ಷ ಬೆಂಗಳೂರು ಬಹುಮಹಡಿ ವಸತಿ ಯೋಜನೆಯಡಿ ಇಲ್ಲಿಯವರೆಗೆ 53,807 ಮನೆಗಳಿಗೆ ಟೆಂಡರ್ ಕರೆಯಲಾಗಿದ್ದು, ಕಾಮಗಾರಿಯು ಪ್ರಗತಿಯಲ್ಲಿದೆ. ಇವುಗಳ ಪೈಕಿ 20 ಸಾವಿರ ಮನೆಗಳನ್ನು ಪ್ರಸಕ್ತ ಸಾಲಿನ ಅಂತ್ಯಕ್ಕೆ ಪೂರ್ಣಗೊಳಿಸಿ, ಫಲಾನುಭವಿಗಳಿಗೆ ನೀಡಲಾಗುವುದು ಎಂದರು.

75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸವಿನೆನಪಿಗಾಗಿ 750 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಸತಿ ರಹಿತ ಮತ್ತು ನಿವೇಶನ ರಹಿತರನ್ನು ಗುರುತಿಸಿ ಸರ್ವರಿಗೂ ವಸತಿ ಕಲ್ಪಿಸಲು ಉದ್ದೇಶಿಸಲಾಗಿದೆ. ಕರ್ನಾಟಕ ಗೃಹ ಮಂಡಳಿಯ ವತಿಯಿಂದ ವಸತಿ ಬಡಾವಣೆಗಳ ಅಭಿವೃದ್ಧಿ, ಮನೆಗಳ ನಿರ್ಮಾಣ ಮತ್ತು ಸಹಭಾಗಿತ್ವದಲ್ಲಿ ವಸತಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, 10 ಯೋಜನೆಯಡಿಯಲ್ಲಿ 10,555 ನಿವೇಶನಗಳು ನಿರ್ಮಾಣ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ 11 ವಸತಿ ಯೋಜನೆಗಳು ತಯಾರಿಕಾ ಹಂತದಲ್ಲಿದ್ದು, ಇದರಿಂದ 11,675 ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

- Advertisement -

ಮನೆಗಳು ಹಾಗೂ ವಸತಿ ಬಡಾವಣೆಗಳನ್ನು ನಿರ್ಮಿಸಲು ಅವಶ್ಯಕವಿರುವ ಹಲವು ಇಲಾಖೆಗಳ ಅನುಮತಿ ಪಡೆಯುವ ಪ್ರಕ್ರಿಯೆ ಕ್ಲಿಷ್ಟಕರವಾಗಿದ್ದು, ಅನಗತ್ಯ ವಿಳಂಬವಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡು ನಮ್ಮ ಸರ್ಕಾರವು ಸಂಬಂಧಿತ ಇಲಾಖೆಗಳ ಅನುಮತಿಯನ್ನು ಒಂದೇ ಬಾರಿಗೆ ಪಡೆಯುವ ಸಂಬಂಧ ಚಾಲ್ತಿಯಲ್ಲಿರುವ ಅನುಮೋದನೆ ಪ್ರಕ್ರಿಯೆಗಳನ್ನು ಸರಳೀಕರಿಸಲು ಉದ್ದೇಶಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಸರ್ಕಾರಿ ಮಾಲೀಕತ್ವದಲ್ಲಿರುವ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ 3.36 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುವುದು.  ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ (ಗ್ರಾಮೀಣ) ಒಟ್ಟು 25.40 ಲಕ್ಷ ವಸತಿ ಮತ್ತು ನಿವೇಶನ ರಹಿತರ ಮಾಹಿತಿಯನ್ನು ಕೇಂದ್ರ ಸರ್ಕಾರದ AWAS + Database ನಲ್ಲಿ ನಮೂದು ಮಾಡುವ ಪ್ರಸ್ತಾವನೆಯನ್ನು ಇತ್ತೀಚೆಗೆ ಆನುಮೋದಿಸಲಾಗಿದೆ. ಸರ್ಕಾರದ ವಿವಿಧ ವಸತಿ ಯೋಜನೆಯಡಿ ನಿವೇಶನವನ್ನು ಮಾಡುವುದರಿಂದ ನೀಡಲಾಗಿದ್ದು, ಇದರಿಂದ ನೋಂದಣಿ ಮಾಡುವ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ವಿಳಂಬವನ್ನು ತಪ್ಪಿಸಿ, ಫಲಾನುಭವಿಗಳು ಶೀಘ್ರವಾಗಿ ಮನೆ ನಿರ್ಮಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.

Join Whatsapp