ಬೆಂಗಳೂರು: ವೇಗವಾಗಿ ಬಂದ ಖಾಸಗಿ ಬಸ್ಸೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ತಂದೆ, ತಾಯಿ ಹಾಗೂ ಮಗ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಗೇಟ್ ಬಳಿ ನಡೆದಿದೆ.
ನಗರದ ದಂಪತಿ ಗೌಸ್ (37), ಅಮ್ಮಾಜಾನ್(33) ಹಾಗೂ ಅವರ ಪುತ್ರ ಮಗ ರಿಯಾನ್ (13) ಮೃತಪಟ್ಟವರು.
ಗೌಸ್ ಮೂಲತಃ ಹೊಸಪೇಟೆಯವರು ಹಾಗೂ ಅಮ್ಮಾಜಾನ್ ಆಂಧ್ರಪ್ರದೇಶದ ಕದಿರಿಯದವರು. ಮದುವೆಯಾದ ನಂತರ ನಗರಕ್ಕೆ ಬಂದು ವಾಸ ಮಾಡುತ್ತಿದ್ದರು. ಗೌಸ್ ಸೆಕೆಂಡ್ ಹ್ಯಾಂಡ್ ಬೈಕ್ ತಗೊಂಡು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು.
ಗೌಸ್, ಅಮ್ಮಾಜಾನ್ ದಂಪತಿ ಪುತ್ರ ರಿಯಾನ್ ಮೂವರು ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಸ್ಕೂಟರ್ ನಲ್ಲಿ ಅಮ್ಮಾಜಾನ್ ಅವರ ತಂಗಿ ಮನೆ ಕದಿರಿಗೆ ಹೊರಟಿದ್ದರು. ಮಾರ್ಗಮಧ್ಯೆ ನಿಲ್ಲಿಸಿ ವಿಡಿಯೋ, ಫೋಟೋ ತೆಗೆದುಕೊಂಡು ಮುಂದೆ ಸಾಗಿದ್ದರು.
ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಬಳಿ ಬೆಂಗಳೂರು ಕಡೆಯಿಂದ ಬರುತ್ತಿದ್ದವರು ತಿಂಡಿ ತಿನ್ನಲು ರಸ್ತೆ ಬದಿಯಲ್ಲಿರುವ ಹೋಟೆಲ್ ಗೆ ಹೋಗಲು ಸ್ಕೂಟರ್ ತಿರುಗಿಸಿದ್ದಾರೆ. ಹೋಟೆಲ್ ನಲ್ಲಿ ತಿಂಡಿ ತಿಂದು ಮರಳಿ ಬಾಗೇಪಲ್ಲಿ ಕಡೆಗೆ ಯು ತಿರುವು ತೆಗೆದುಕೊಂಡಿದ್ದಾರೆ. ಆದರೆ ಅಷ್ಟರಲ್ಲೇ ಬಾಗೇಪಲ್ಲಿ ಕಡೆಯಿಂದ ಬಂದ ಖಾಸಗಿ ಬಸ್ ಸ್ಕೂಟಿ ಮೇಲೆ ಎರಗಿದೆ.
ಪರಿಣಾಮ ಸ್ಕೂಟಿ ಬಸ್ ಕೆಳಗೆ ಸಿಲುಕಿ ನಜ್ಜುಗುಜ್ಜಾಗಿ ಡಿವೈಡರ್ ಮೇಲೆ ಹತ್ತಿದೆ. ಬಸ್ ಕೆಳಗೆ ಸಿಲುಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಸಂಚಾರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ಅಪಘಾತ ನಂತರ ಬಸ್ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಅಪಘಾತ ಮುನ್ನ ದಂಪತಿ ಮಗನ ಸಮೇತ ಮಾಡಿರುವ ವೀಡಿಯೋ, ಫೋಟೋಸ್ ನೋಡಿದರೆ ಎಂತಹವರ ಮನ ಕಲುಕುವಂತಿದೆ. ಚಿಕ್ಕಬಳ್ಳಾಪುರ ಸಂಚಾರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.