ಡೆಹ್ರಾಡೂನ್: ಗೋವಾ ಬಳಿಕ ಇದೀಗ ಉತ್ತರಾಖಂಡದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಒಳಜಗಳದಿಂದಾಗಿ ಮತ್ತೆ ಮೂವರು ಕಾಂಗ್ರೆಸ್ ನಾಯಕರು ಪಕ್ಷ ತೊರೆಯುವುದಾಗಿ ಘೋಷಿಸಿದ್ದಾರೆ.
ಉತ್ತರಾಖಂಡ ಕಾಂಗ್ರೆಸ್ ಹಿರಿಯ ನಾಯಕರಾದ ಆರ್ಪಿ ರಟೂರಿ ಮತ್ತು ಕಮಲೇಶ್ ರಾಮನ್ ಮತ್ತು ಹಿರಿಯ ನಾಯಕ ಕುಲದೀಪ್ ಚೌಧರಿ ‘ಕೈ’ಗೆ ಗುಡ್ ಬೈ ಹೇಳಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಡಾ.ಆರ್.ಪಿ.ರಟೂರಿ ಕಳೆದ ನಾಲ್ಕು ದಶಕಗಳಿಂದ ಡೆಹ್ರಾಡೂನ್ ಕಾಂಗ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಕಮಲೇಶ್ ರಾಮನ್ ಅವರು ಮಹಾನಗರ ಪಾಲಿಕೆ ಅಧ್ಯಕ್ಷರಿಂದ ರಾಜ್ಯ ಉಪಾಧ್ಯಕ್ಷರ ವರೆಗೆ ಕಾಂಗ್ರೆಸ್ ಪಕ್ಷದ ಮಹಿಳಾ ವಿಭಾಗದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಇಬ್ಬರೂ ನಾಯಕರ ನಿರ್ಗಮನ ಉತ್ತರಾಖಂಡ ಕಾಂಗ್ರೆಸ್ ಗೆ ಭಾರಿ ಹಿನ್ನಡೆಯಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ನಂತರ ರಾಜ್ಯದಲ್ಲಿ ನೂತನ ರಾಜ್ಯಾಧ್ಯಕ್ಷರ ಸ್ಥಾನವನ್ನು ಕರಣ್ ಮೆಹ್ರಾಗೆ ವಹಿಸಲಾಗಿತ್ತು. ಪಕ್ಷವು ಕರಣ್ ಮೆಹ್ರಾಗೆ ಯುವ ಮುಖವಾಗಿ ಜವಾಬ್ದಾರಿಯನ್ನು ನೀಡಿತು, ದೊಡ್ಡ ಸವಾಲನ್ನು ಕೊನೆಗೊಳಿಸುವ ವಿಶ್ವಾಸವನ್ನು ವ್ಯಕ್ತಪಡಿಸಿತು, ಆದರೆ ರಾಜ್ಯದಲ್ಲಿ ಪಕ್ಷದೊಳಗೆ ನಡೆಯುತ್ತಿರುವ ಭಿನ್ನಾಭಿಪ್ರಾಯಗಳು ಅವರ ಕಾರ್ಯನಿರ್ವಹಣೆಯ ಮೇಲೆ ತುಂಬಾ ಪರಿಣಾಮ ಬೀರುತ್ತಿವೆ.
ಗೋವಾದಲ್ಲಿ 5 ಶಾಸಕರು ನಾಪತ್ತೆಯಾದ ಬೆನ್ನಲ್ಲೇ ಉತ್ತರಖಂಡದ ಮೂವರು ನಾಯಕರ ನಿರ್ಗಮನ ಕಾಂಗ್ರೆಸ್ ಗೆ ಮತ್ತಷ್ಟು ಹತಾಶೆಯನ್ನು ಮೂಡಿಸಿದೆ.