ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್ ಗೆ ರಾಜ್ಯಪಾಲರು ಅನುಮತಿ ನೀಡಿರುವ ವಿಚಾರವಾಗಿ ಕಾಂಗ್ರೆಸ್ ಕರೆ ಕೊಟ್ಟಿದ್ದ ಪ್ರತಿಭಟನೆಯಲ್ಲಿ ಬಸ್ಸಿಗೆ ಕಲ್ಲು ಹೊಡೆದ ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಶಾಹುಲ್ ಹಮಿದ್, ಅನ್ವರ್ ಮತ್ತು ಕಿಶೋರ್ ಶೆಟ್ಟಿ ಯನ್ನು ಬಂಧಿಸಲಾಗಿದ್ದು, ಇನ್ನುಳಿದ ಆರೋಪಿಗಳನ್ನು ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಪಾದಯಾತ್ರೆ ಬಳಿಕ ಸಭೆ ಮುಗಿಯುತ್ತಲೇ ರಸ್ತೆಗಿಳಿದ ಕಾರ್ಯಕರ್ತರು ಅಲ್ಲೇ ಸಂಚರಿಸುತ್ತಿದ್ದ ಖಾಸಗಿ ಸಿಟಿ ಬಸ್ ಗೆ ಕಲ್ಲು ಎಸೆದಿದ್ದಾರೆ. ಪರಿಣಾಮ ಬಸ್ ನ ಎದುರಿನ ಗಾಜು ಸಂಪೂರ್ಣ ಪುಡಿಯಾಗಿದೆ.
ಜೋಕಟ್ಟೆಯಿಂದ ಸ್ಟೇಟ್ ಬ್ಯಾಂಕ್ ಗೆ ತೆರಳುತ್ತಿದ್ದ 2ಸಿ ನಂಬರ್ ನ ಬಸ್ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಜೋಕಟ್ಟೆಯ ನೌಫಾಲ್ ಎಂಬವರಿಗೆ ಸೇರಿದ್ದು ಎಂದು ತಿಳಿದುಬಂದಿದ್ದು. ಈತ ಬಿಜೆಪಿಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಬಸ್ಸು ಚಾಲಕ, ನಿರ್ವಾಹಕನ ಆಕ್ರೋಶ
ಖಾಸಗಿ ಬಸ್ಸಿನ ಗಾಜು ಒಡೆದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಸ್ಸು ಚಾಲಕ, ನಿರ್ವಾಹಕರು ಈ ರೀತಿ ಬಸ್ಸಿನ ಗಾಜು ಒಡೆದ ಸಂದರ್ಭ ಪ್ರಯಾಣಿಕರಿಗೆ ತೊಂದರೆ ಆದರೆ ಹೊಣೆ ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.