ಬೆಂಗಳೂರು: ಸಾಲ ಕೊಡಿಸುವುದಾಗಿ ಹೇಳಿ ಉದ್ಯಮಿಗೆ 1 ಕೋಟಿ ರೂಪಾಯಿ ನಕಲಿ ನೋಟುಗಳ ನೀಡಿ ಸರ್ವಿಸ್ ಚಾರ್ಜ್ ಎಂದು 27 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ಮೂವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಆರ್ ಟಿ ನಗರದ ದಿನ್ನೂರು ಮುಖ್ಯರಸ್ತೆ ನಿವಾಸಿಗಳಾದ ಮುನ್ನಾ ಶರಣ್ (35), ವಿಷ್ಣುರಾಜನ್ ಆರ್ (26), ರಾಮಮೂರ್ತಿನಗರದ ಪ್ರವೀಣ್ ಕುಮಾರ್ (40) ಎಂದು ಗುರುತಿಸಲಾಗಿದೆ.
ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಲಕ್ಷ್ಮಣ್ ರಾವ್, ತುಷಾರ್ ಮತ್ತು ಆಶಾಲತಾ ರಾವ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ದೂರುದಾರ ಎನ್ ಪಾರ್ಥಸಾರಥಿ ಎಂಬವರು 2017ರಲ್ಲಿ ಬಾಣಸವಾಡಿಯ ಸಂಸ್ಥೆಯೊಂದರಲ್ಲಿ ಬಂಡವಾಳ ಹೂಡಲು ಆಸ್ತಿಯನ್ನು ಅಡವಿಟ್ಟು ಸುಮಾರು 1.75 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಸಾಂಕ್ರಾಮಿಕ ರೋಗದಿಂದಾಗಿ ಸಾಲ ತೀರಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು.
ಸಾಲ ತೀರಿಸುವ ಪ್ರಯತ್ನದ ವೇಳೆ ಪಾರ್ಥಸಾರಥಿಯವರು ಆರೋಪಿಗಳ ಸಂಪರ್ಕಕ್ಕೆ ಸಿಕ್ಕಿದ್ದು, ಈ ವೇಳೆ ಆರೋಪಿಗಳು ಸಾಲ ತೀರಿಸುವ ಭರವಸೆ ನೀಡಿದ್ದಾರೆ.
ತಮ್ಮ ಬಳಿ 1.3 ಕೋಟಿ ರೂ.ಗಳಿದ್ದು, ಈ ಹಣವನ್ನು ಸಂಪೂರ್ಣವಾಗಿ ಸಾಲವೆಂದು ಪಡೆದುಕೊಡರೆ ಶೇ.5ರಷ್ಟು ರಿಯಾಯಿತಿ ನೀಡುವುದಾಗಿ ಹೇಳಿಕೊಂಡಿದ್ದು, ಸರ್ವಿಸ್ ಚಾರ್ಜ್ ಎಂದು 27 ಲಕ್ಷ ರೂಪಾಯಿಯನ್ನು ವರ್ಗಾಯಿಸಲು ಹೇಳಿದ್ದಾರೆ. ಈ ಸಂಬಂಧ ಪಾರ್ಥಸಾರಥಿ ಆನ್ ಲೈನ್ ಮೂಲಕ ಹಣವನ್ನು ವರ್ಗಾಯಿಸಿದ ಬಳಿಕ ಆರೋಪಿಗಳು ಹಣದ ಬ್ಯಾಗ್ ಅನ್ನು ನೀಡಿದ್ದಾರೆ. ಬ್ಯಾಗ್ ಪಡೆದ ಪಾರ್ಥಸಾರಥಿ ನೋಟುಗಳನ್ನು ಪರಿಶೀಲಿಸಿದಾಗ ಅದು ನಕಲಿ ನೋಟುಗಳು ಎಂದು ತಿಳಿದುಬಂದ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿಗಳಿಂದ ಜಾಗ್ವಾರ್ ಕಾರು, 6 ಕೆಜಿ ನಕಲಿ ಚಿನ್ನದ ಬಿಸ್ಕತ್ ಗಳು, 1 ಕೋಟಿ ರೂಪಾಯಿ ನಕಲಿ ನೋಟು, 20 ಲಕ್ಷ ರೂಪಾಯಿ ನಗದು, ನಕಲಿ ಬುಲೆಟ್ ಗಳು ಸೇರಿದಂತೆ ಎರಡು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.