ಬಂಟ್ವಾಳ : ಕೋವಿಡ್ -19 ಕರ್ತವ್ಯದಲ್ಲಿ ಇದ್ದ ಆಶಾ ಕಾರ್ಯಕರ್ತೆಯೊಬ್ಬರ ಮೇಲೆ ಹಲ್ಲೆಗೆ ಮುಂದಾಗಿ ಜೀವ ಬೆದರಿಕೆ ಒಡ್ಡಿರುವ ಆರೋಪದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ತಾಲೂಕಿನ ಸರಪಾಡಿ ಗ್ರಾಮದ ನಿವಾಸಿಗಳಾದ ಸಂದೀಪ್ ಮತ್ತು ಸಂತೋಷ ಎಂದು ಗುರುತಿಸಲಾಗಿದೆ.
ಸರಪಾಡಿಯ ಮನೆಯೊಂದರಲ್ಲಿ ಕೊರೋನಾ ಪಾಸಿಟಿವ್ ಬಂದ ಮಹಿಳೆಯ ಆರೋಗ್ಯ ವಿಚಾರಿಸಿ, ಅವರಿಗೆ ಧೈರ್ಯ ತುಂಬಿ, ಮನೆಯಿಂದ ಹೊರ ಹೋಗದಂತೆ ತಿಳಿಸಿ ವಾಪಸ್ ಬರುತ್ತಿದ್ದ ಇಲ್ಲಿನ ಆಶಾ ಕಾರ್ಯಕರ್ತೆಯನ್ನು ಅಡ್ಡಗಟ್ಟಿದ ಸೋಂಕಿತ ಮಹಿಳೆಯ ಸಂಬಂಧಿಕರಾದ ಸಂದೀಪ್ ಮತ್ತು ಸಂತೋಷ್, ಅತ್ತೆಗೆ ಕರೋನ ಟೆಸ್ಟ್ ಮಾಡಿಸಿ ಪಾಸಿಟಿವ್ ಬರಿಸಿದ್ದೇ ನೀನು. ಪಾಸಿಟಿವ್ ಬರಿಸಿದರೆ ನಿನಗೆ ಭಾರೀ ಹಣ ಬರುತ್ತದೆ ಎಂದು ಹಲ್ಲೆಗೆ ಮುಂದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಆರೋಪಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಐ.ಪಿ.ಸಿ ಕಲಂ 354, 506, 269, 270 ಮತ್ತು ಕಲಂ 5 [1] ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020ರಂತೆ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.