ನವದೆಹಲಿ: ಬಿಜೆಪಿಗೆ ₹1 ಸಾವಿರ ಕೋಟಿಗೂ ಅಧಿಕ ಮೊತ್ತ ನೀಡಿದ ಒಟ್ಟು 35 ಔಷಧ ತಯಾರಿಕಾ ಕಂಪನಿಗಳಲ್ಲಿ ಏಳು ಕಂಪನಿಗಳು ಕೆಮ್ಮು ಸಿರಪ್ ಹಾಗೂ ರೆಮ್‌ಡೆಸಿವಿರ್ ಸೇರಿದಂತೆ ಕಳಪೆ ಗುಣಮಟ್ಟದ ಔಷಧ ತಯಾರಿಸಿದ ಆರೋಪ ಹೊತ್ತಿವೆ ಎಂದು ಕಾಂಗ್ರೆಸ್ ಹೇಳಿದೆ
ಚುನಾವಣಾ ಆಯೋಗವು ಮಾರ್ಚ್ 14ರಂದು ಬಹಿರಂಗಪಡಿಸಿದ ಚುನಾವಣಾ ಬಾಂಡ್ ಕುರಿತ ಮಾಹಿತಿ ಪ್ರಕಾರ ಸುಮಾರು 35 ಕಂಪನಿಗಳು ಸುಮಾರು ₹1 ಸಾವಿರ ಕೋಟಿಯಷ್ಟು ದೇಣಿಗೆಯನ್ನು ಬಾಂಡ್ ಖರೀದಿಸುವ ಮೂಲಕ ನೀಡಿರುವ ಮಾಹಿತಿ ಬಹಿರಂಗಗೊಂಡಿದೆ ಎಂದು ಕಾಂಗ್ರೆಸ್ ವಕ್ತಾರ ಜೈರಾಂ ರಮೇಶ್ ಹೇಳಿದ್ದಾರೆ.
ಇವುಗಳಲ್ಲಿ ಕಳಪೆ ಗುಣಮಟ್ಟದ ಔಷಧ ತಯಾರಿಕೆಯಲ್ಲಿ ತೊಡಗಿರುವ ಏಳು ಕಂಪನಿಗಳು ಇವೆ. ಇವುಗಳು ವ್ಯಾಪಕ ಬಳಕೆಯ ಕೆಮ್ಮಿನ ಸಿರಪ್, ರಕ್ತದೊತ್ತಡ ನಿಯಂತ್ರಕ ಔಷಧಗಳು, ಕೋವಿಡ್-19ರ ಚಿಕಿತ್ಸೆ ಅವಧಿಯಲ್ಲಿ ನೀಡಲಾಗುತ್ತಿದ್ದ ರೆಮ್‌ಡೆಸಿವಿರ್ ಸೇರಿವೆ ಎಂದು ಜೈರಾಂ ರಮೇಶ್ ಹೇಳಿದ್ದಾರೆ.
ಸರ್ಕಾರದ ‘ಚಂದಾ ದೊ, ಧಂಡಾ ಲೊ’ದಂತ ಒಳ ಒಪ್ಪಂದಗಳು ಕಳಪೆ ಗುಣಮಟ್ಟದ ಔಷಧಗಳ ತಯಾರಿಕೆಗೆ ರಹದಾರಿ ಕಲ್ಪಿಸಿವೆ. ಇದರ ಪರಿಣಾಮ ಸರ್ಕಾರವನ್ನು ನಂಬಿರುವ ಮುಗ್ಧ ಸಾರ್ವಜನಿಕರ ಮೇಲಾಗುತ್ತಿದೆ. ಪಾರದರ್ಶಕತೆ ಮತ್ತು ಸ್ವಚ್ಛ ಮಾರುಕಟ್ಟೆಯ ನಿರೀಕ್ಷೆಯಲ್ಲಿ ಜನರು ಇದ್ದಾರೆ. ಆದರೆ ಸರ್ಕಾರ ಮತ್ತು ಕಂಪನಿಗಳು ಒಳ ಒಪ್ಪಂದಗಳ ಮೂಲಕ ಜನರಿಗೆ ನಂಬಿಕೆ ದ್ರೋಹ ಎಸಗುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.