ಮಂಗಳೂರು: ಜಾನುವಾರು ಸಂರಕ್ಷಣಾ ಕಾಯ್ದೆಯಡಿಯಲ್ಲಿ ಬಕ್ರೀದ್ ಹಬ್ಬದ ಸಂಕೇತವಾಗಿ ನಡೆಸುವ ಖುರ್ಬಾನಿಗೆ ಅವಕಾಶ ಮಾಡಿ ಕೊಡಲು ಸರಕಾರ ನಿರ್ದಿಷ್ಟ ಹಾಗೂ ಸ್ಪಷ್ಟತೆಯ ನಿಯಮವನ್ನು ಪ್ರಕಟಿಸುವ ಸಂಬಂಧ ಶಾಸಕ ಯು.ಟಿ.ಖಾದರ್, ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಬಕ್ರೀದ್ ಹಬ್ಬದ ಪ್ರಮುಖ ಅಂಗವಾಗಿ ನಡೆಸುವ ಖುರ್ಬಾನಿಯನ್ನು ನೆರವೇರಿಸಲು ಇಚ್ಛಿಸಿದವರಿಗೆ ಜಾನುವಾರು ಸಂರಕ್ಷಣಾ ಕಾಯ್ದೆಯಡಿಯಲ್ಲಿ ಅವಕಾಶವಿದೆ. ಹದಿಮೂರು ವರ್ಷಗಳ ಮೇಲ್ಪಟ್ಟ ಕೋಣಗಳನ್ನು ಜಿಲ್ಲಾಡಳಿತ ಅಥವಾ ಸ್ಥಳೀಯಾಡಳಿತ ಸೂಚಿಸಿದ ಸ್ಥಳದಲ್ಲಿ ಕಾನೂನು ವ್ಯಾಪ್ತಿಯಲ್ಲಿ ವಧೆ ನಡೆಸುವ ಅವಕಾಶ ಜಾನುವಾರು ಸಂರಕ್ಷಣಾ ಕಾನೂನಿನಲ್ಲಿದೆ. ಆದರೆ ಈ ಬಗ್ಗೆ ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆಗೆ ಸ್ಪಷ್ಟತೆ ಇಲ್ಲದೇ ಇರುವುದರಿಂದ ಜಿಲ್ಲಾಡಳಿತ ಕಾನೂನು ವ್ಯಾಪ್ತಿಯಲ್ಲಿ ಖುರ್ಬಾನಿ ನಡೆಸಲು ನಿರ್ದಿಷ್ಟ ಹಾಗೂ ಸ್ಪಷ್ಟತೆಯಿರುವ ಸುತ್ತೋಲೆಗಳನ್ನು ಹೊರಡಿಸಬೇಕು. ಯಾವುದೇ ಸಮುದಾಯ ಆಗಲಿ ಅವರಿಗೆ ಬರುವ ಹಬ್ಬ ಹರಿದಿನಗಳನ್ನು ಕಾನೂನು ವ್ಯಾಪ್ತಿಯಲ್ಲಿ ಸಂತೋಷವಾಗಿ ಆಚರಿಸಲು ಅವಕಾಶ ಮಾಡಿ ಕೊಡುವುದು ಸರಕಾರ ಮತ್ತು ಜಿಲ್ಲಾಡಳಿತದ ಜವಾಬ್ದಾರಿಯೆಂದು ಶಾಸಕ ಯು.ಟಿ.ಖಾದರ್ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.