►ಸಿಸಿಟಿವಿ ದೃಶ್ಯ ಬಿಡುಗಡೆ, ಘಟನೆಗೆ ಸ್ಫೋಟಕ ತಿರುವು
ಲಕ್ನೋ: ಉತ್ತರಪ್ರದೇಶದ ಲಕ್ನೋದಲ್ಲಿ ಇತ್ತೀಚೆಗೆ ಪ್ರಾರಂಭಗೊಂಡ ಲುಲು ಮಾಲ್ ನಲ್ಲಿ ಯುವಕರ ಗುಂಪೊಂದು ಸಾಮೂಹಿಕ ನಮಾಝ್ ಮಾಡುವುದು ವಿವಾದವಾಗಿತ್ತು. ಇದರ ಬೆನ್ನಲ್ಲೇ ಹಿಂದುತ್ವವಾದಿ ಸಂಘಟನೆಯ ಕಾರ್ಯಕರ್ತರು ಮಾಲ್ ನಲ್ಲಿ ಹಿಂದೂ ಧಾರ್ಮಿಕ ಪೂಜೆ ನಡೆಸಲು ಮುಂದಾಗಿದ್ದರು. ಬಳಿಕ ಪೊಲೀಸರು ಇತ್ತಂಡಗಳ ಸದಸ್ಯರನ್ನೂ ಬಂಧನ ಮಾಡಿದ್ದರು.
ಆದರೆ ಇದೀಗ ಪ್ರಸ್ತುತ ಬೆಳವಣಿಗೆಗೆ ಸ್ಫೋಟಕ ತಿರುವು ದೊರಕಿದ್ದು ಅಲ್ಲಿ ನಮಾಝ್ ಮಾಡಿದ ತಂಡಕ್ಕೆ ನಮಾಝ್ ಹೇಗೆ ನಿರ್ವಹಿಸಬೇಕೆಂಬ ಅರಿವೂ ಇಲ್ಲ ಎಂಬ ವರದಿ ದೊರಕಿದೆ ಮತ್ತು ವ್ಯವಸ್ಥಿತ ಷಡ್ಯಂತ್ರದ ಶಂಕೆ ವ್ಯಕ್ತವಾಗುತ್ತಿದೆ. ಏಷ್ಯಾದಲ್ಲೇ ದೊಡ್ದ ಮಾಲ್ ಆಗಿರುವ ಲಕ್ನೋದಲ್ಲಿರುವ ಲುಲು ಮಾಲ್ ನ ಖ್ಯಾತಿಗೆ ಧಕ್ಕೆ ತರಲು ಪ್ರಯತ್ನಿಸಿರುವ ನಿಟ್ಟಿನಲ್ಲಿ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಇದಕ್ಕೆ ಪೂರಕವಾದ ಸಿಸಿಟಿವಿ ದೃಶ್ಯ ಕೂಡಾ ಇದೀಗ ಲಭಿಸಿದೆ.
ಎಂಟು ಮಂದಿಯ ತಂಡ ಒಟ್ಟಾಗಿ ಮಾಲ್ ಗೆ ಪ್ರವೇಶಿಸಿದ್ದಾರೆ. ಶಾಪಿಂಗ್ ಮಾಡಲೋ, ಸುತ್ತಿ ನೋಡಲೋ ಅಥವಾ ಮಾಲ್ ನಲ್ಲಿ ಫೋಟೋ ಕ್ಲಿಕ್ಕಿಸಲೋ ನಿಲ್ಲದೇ ಏಕಾಏಕಿ ನಮಾಝ್ ಮಾಡಲು ಮುಂದಾಗಿದ್ದಾರೆ. ಬೇರೆ ಏನಕ್ಕೂ ಆಸಕ್ತಿ ತೋರದವರು ನೆಲ ಮಹಡಿಯಲ್ಲಿ ನಮಾಝ್ ಗೆ ಮುಂದಾದಾಗ ಅವರನ್ನು ಸಿಬ್ಬಂದಿಗಳು ತಡೆದಿದ್ದಾರೆ. ಬಳಿಕ ಒಂದನೇ ಮಹಡಿಯಲ್ಲೂ ನಮಾಝ್ ಮಾಡಲು ಮುಂದಾದಾಗ ಅಲ್ಲಿನ ಸಿಬ್ಬಂದಿಗಳು ತಡೆಯೊಡ್ಡಿದ್ದು, ಎರಡನೇ ಮಹಡಿಯಲ್ಲಿ ಜನಸಂದಣಿ ಇಲ್ಲದ್ದನ್ನು ಗಮನಿಸಿ ಆತುರಾತುರದಿಂದ ನಮಾಝ್ ನಿರ್ವಹಿಸಿದ್ದಾರೆ.
ಕೇವಲ 18 ಸೆಕುಡುಗಳ ಒಳಗೆ ತರಾತುರಿಯಲ್ಲಿ ನಮಾಝ್ ಮುಗಿಸಿದವರು ಅಷ್ಟೇ ಅವಸರಲ್ಲಿ ಮಾಲ್ ನಿಂದ ಕಾಲ್ಕಿತ್ತಿದ್ದಾರೆ. ಒಟ್ಟಾರೆ ಕುತೂಹಲಕ್ಕಾಗಿಯೂ ಮಾಲ್ ಅನ್ನು ಸುತ್ತಿ ನೋಡಲು ಆ ತಂಡ ನಿಲ್ಲಲಿಲ್ಲ ಎಂದು ದೃಶ್ಯಾವಳಿಗಳು ಸ್ಪಷ್ಟಪಡಿಸುತ್ತವೆ.
ಆ ತಂಡಕ್ಕೆ ನಮಾಝ್ ಅಂದರೇನು ಎಂಬ ಸಣ್ಣ ಸುಳಿವು ಕೂಡಾ ಇಲ್ಲ ಎಂಬುವುದು ಸ್ಪಷ್ಟವಾಗಿದ್ದು, ಇದು ಮಾಲ್ ನ ಜನಪ್ರಿಯತೆಗೆ ಚ್ಯುತಿ ತರಲು ಯಾರೋ ಮುಸ್ಲಿಂ ನಾಮಧಾರಿಗಳು ನಡೆಸಿದ ನಿಯೋಜಿತ ಕೃತ್ಯ ಎಂಬುದು ಧೃಡವಾಗಿದೆ.