ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಏಪ್ರಿಲ್ ಕೊನೆಯ ವಾರದಲ್ಲಿ ಪ್ರಕಟಿಸಲಾಗುವುದು. ಪೂರಕ ಪರೀಕ್ಷೆಗೆ ಏಪ್ರಿಲ್ 21ರಿಂದ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಪಿಯು ಪರೀಕ್ಷಾ ಮಂಡಳಿ ತಿಳಿಸಿದೆ.
ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾರ್ಕ್ಸ್ ಕಾರ್ಡ್ ಕಮ್ ಅರ್ಜಿಗಳನ್ನು (ಎಂಸಿಎ) ಈ ವರ್ಷದಿಂದ ನೀಡಲಾಗುವುದಿಲ್ಲ. ಪ್ರಾಂಶುಪಾಲರು ಮಾರ್ಚ್ 2023ರ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು 2023ರ ದ್ವಿತೀಯ ಪಿಯು ಪೂರಕ ಪರೀಕ್ಷೆಗೆ ಹಾಜರಾಗುವುದಿದ್ದರೆ, ಮಂಡಳಿಯು ಒದಗಿಸಿದ ಫಲಿತಾಂಶದ ಪಟ್ಟಿ ಆಧಾರದ ಮೇಲೆ ಶುಲ್ಕವನ್ನು ಸಂಗ್ರಹಿಸಬೇಕು.
2022-ಸೆಪ್ಟಂಬರ್ ಪರೀಕ್ಷೆ ಅಥವಾ ಹಿಂದಿನ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ 2023ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಅರ್ಜಿಯನ್ನು “MCA’ ಆಧಾರದ ಮೇಲೆ ಮಾತ್ರ ಸ್ವೀಕರಿಸಬೇಕು. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಯು ತೇರ್ಗಡೆಯಾದ ವಿಷಯದಲ್ಲಿ ಫಲಿತಾಂಶಗಳನ್ನು ತಿರಸ್ಕರಿಸುವ ಅರ್ಜಿಯನ್ನು ಪ್ರಾಂಶುಪಾಲರು ಫಲಿತಾಂಶ ಪಟ್ಟಿಯ ಆಧಾರದ ಮೇಲೆ ಮಾತ್ರ ಸ್ವೀಕರಿಸಬೇಕು ಮತ್ತು MCA ಅನ್ನು ಈ ವರ್ಷದಿಂದ ನೀಡಲಾಗುವುದಿಲ್ಲ. ಅನುಸರಿಸಬೇಕಾದ ಕಾರ್ಯವಿಧಾನಗಳನ್ನು ‘ಅನುತ್ತೀರ್ಣರಾದ ವಿದ್ಯಾರ್ಥಿಯು’ ಫಲಿತಾಂಶ ನಿರಾಕರಣೆ ಅರ್ಜಿಯ ಹಿಂಭಾಗದಲ್ಲಿ ನಮೂದಿಸಲಾಗಿದೆ.
ದ್ವಿತೀಯ ಪಿಯುಸಿ 2022ರ ವಾರ್ಷಿಕ ಅಥವಾ ಪೂರಕ ಪರೀಕ್ಷಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಫಲಿತಾಂಶಗಳನ್ನು ತಿರಸ್ಕರಿಸಿ, ದ್ವಿತೀಯು ಪಿಯುಸಿ 2023ರ ಪೂರಕ ಪರೀಕ್ಷೆಗೆ ಹಾಜರಾಗಲು ಇಚ್ಛಿಸಿದಲ್ಲಿ “ORIGINAL PASS MARKS CERTIFICATE ಸಲ್ಲಿಸಿ ಪೂರಕ ಪರೀಕ್ಷೆಗೆ ಹಾಜರಾಗಬಹುದು. 2023ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು, ವೆಬ್ ಸೈಟ್ ಮೂಲಕ ಡೌನ್ ಲೋಡ್ ಮಾಡಿದ ಫಲಿತಾಂಶ ಪ್ರತಿಯನ್ನು ಸಲ್ಲಿಸಿ ಫಲಿತಾಂಶವನ್ನು ತಿರಸ್ಕರಿಸಿ ಪೂರಕ ಪರೀಕ್ಷೆಗೆ ಹಾಜರಾಗಬಹುದು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಸಹಾಯವಾಣಿ ಸಂಖ್ಯೆ: 080- 23369154 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.