ಬೆಂಗಳೂರು: ‘ನಮ್ಮ ಮನೆಯನ್ನು ಸುಟ್ಟಿದ್ದು ರಜಾಕಾರರು, ಮುಸ್ಲಿಮರಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರಿಗೆ ಮಲ್ಲಿಕಾರ್ಜುನ ಖರ್ಗೆಯವರ ಇತಿಹಾಸ ಗೊತ್ತಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
‘ರಜಾಕಾರರಿಂದ ತನ್ನ ತಾಯಿ, ಸಹೋದರಿ ಸುಟ್ಟು ಹೋದರೂ ಖರ್ಗೆ ಮೌನ ವಹಿಸಿದ್ದಾರೆ’ ಎಂಬ ಆದಿತ್ಯನಾಥ ಟೀಕೆ ಕುರಿತು ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ‘ಮನೆ ಸುಟ್ಟಿದ್ದು ಮುಸ್ಲಿಂ ಸಮುದಾಯವಲ್ಲ. ಒಂದು ಸಮುದಾಯದ ಯಾರೋ ಮೋಸ ಮಾಡುತ್ತಾರೆ ಎಂಬ ಕಾರಣಕ್ಕೆ ಇಡೀ ಸಮುದಾಯವನ್ನು ಹೊಣೆ ಮಾಡಲು ಆಗುತ್ತದಾ’ ಎಂದು ಕೇಳಿದರು.
ಈ ಚರ್ಚೆಯೇ ಈಗ ಅಪ್ರಸ್ತುತ. ಇಷ್ಟೆಲ್ಲ ಮಾತನಾಡುವ ಇವರು ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ಕೊಡುತ್ತಾರಾ? ಬಿಜೆಪಿ, ಆರ್ಎಸ್ಎಸ್ ಸಿದ್ಧಾಂತಗಳಲ್ಲಿ ಮೊದಲು ಸಮಾನತೆ ತರಲಿ ಎಂದರು.
‘ಬಿಜೆಪಿ ಅಪಾಯದಲ್ಲಿದೆ. ಅದಕ್ಕಾಗಿ ಹಿಂದೂಗಳೆಲ್ಲರೂ ಅಪಾಯದಲ್ಲಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಬಿಜೆಪಿಯವರು ತಾವು ಅಪಾಯದಲ್ಲಿದ್ದಾಗ ಹಿಂದೂಗಳ ಹೆಸರು ಬಳಸಿಕೊಳ್ಳುತ್ತಾರೆ’ ಎಂದು ಹೇಳಿದರು.