ಮುಮ್ತಾಝ್ ಅಲಿ ಸಾವಿಗೆ ಕಾರಣರಾದವರನ್ನು ಜಮಾತ್, ಸಾಮಾಜಿಕ ಸಂಘಟನೆಗಳಿಂದ ದೂರವಿಡಬೇಕು: ರಿಯಾಝ್ ಫರಂಗಿಪೇಟೆ

Prasthutha|

ಮಂಗಳೂರು: ಉದ್ಯಮಿ ಮುಮ್ತಾಝ್ ಅಲಿ ಸಾವಿಗೆ ಕಾರಣರಾದವರನ್ನು ಜಮಾತ್, ಸಾಮಾಜಿಕ ಸಂಘಟನೆಗಳಿಂದ ದೂರವಿಡಬೇಕು ಎಂದು ಎಸ್ ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ.

- Advertisement -


ಅವರು ಸುರತ್ಕಲ್ ಜಂಕ್ಷನ್ ನಲ್ಲಿ ಮುಮ್ತಾಝ್ ಅಲಿ ಅಭಿಮಾನಿ ಬಳಗದಿಂದ ನಡೆದ ಬೃಹತ್ ಹಕ್ಕೊತ್ತಾಯ ಸಭೆಯನ್ನು ಉದ್ದೇಶಿಸಿ ಮಾತಾಡಿದರು.


”ತನ್ನ ಜೊತೆ ಇದ್ದವರು ಊಟ ಹಾಕಿದವರನ್ನೇ ಇಂದು ಕೊಲ್ಲುತ್ತಾರೆ ಎಂದರೆ ನಮ್ಮ ಸಮಾಜದಲ್ಲಿ ಇನ್ನೂ ಅಂತವರು ಇದ್ದಾರೆ. ಅವರನ್ನು ನಮ್ಮ ಜಮಾತ್ ನಲ್ಲಿಟ್ಟು ಬೆಳೆಸುತ್ತಿರುವುದು ಅವರನ್ನು ಗುರುತಿಸುವಲ್ಲಿ ವಿಫಲರಾಗಿರುವುದು ನಮ್ಮ ದೊಡ್ಡ ತಪ್ಪು. ನಮ್ಮ ಮಸೀದಿ, ಸಾಮಾಜಿಕ ಸಂಘಟನೆಗಳಿಂದ ಅಂತವರನ್ನು ದೂರವಿಡಬೇಕು. ಮುಂದೆ ಇನ್ನಷ್ಟು ಮಂದಿ ಮೋಸದ ಜಾಲಕ್ಕೆ ಬಲಿಯಾಗಬಾರದು. ಆ ಜವಾಬ್ದಾರಿಯನ್ನು ನಾವು ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಹೋರಾಟದ ಅಗತ್ಯವಿದೆ ಎಂದರು.

- Advertisement -

ನಮಗೆ ಸರಕಾರದ ಮೇಲೆ ನಿರೀಕ್ಷೆಯಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಈ ಪ್ರಕರಣ ಹಳ್ಳ ಹಿಡಿಯದಂತೆ ನೋಡಿಕೊಳ್ಳಲು ನಾವೆಲ್ಲರೂ ಮುಂದೆ ಬೆಂಗಳೂರಿಗೆ ಹೋಗಿ ವಿಧಾನ ಸೌಧ ಎದುರು ಪ್ರತಿಭಟನೆ ನಡೆಸುವ ಅನಿವಾರ್ಯತೆ ಎದುರಾದರೂ ಹಿಮ್ಮೆಟ್ಟಬಾರದು“ ಎಂದರು.


ಪೊಲೀಸ್ ಇಲಾಖೆ ಇಂತಹ ಪ್ರಕರಣ ಗಂಭೀರವಾಗಿ ಪರಿಗಣಿಸುವುದಿಲ್ಲ. ಆರೋಪಿಗಳಿಂದ ಸಿಗುವ ವಿಡಿಯೋ ಸಾಕ್ಷಿ ಗಳನ್ನೇ ಬಂಡವಾಳ ಮಾಡಿಕೊಂಡು ಅದರ ಮುಖಾಂತರ ಆರೋಪಿಗಳ ಬಳಿ ಕೋಟ್ಯಂತರ ರೂಪಾಯಿ ಹಣ ಪೀಕಿಸಿ ಜಿಲ್ಲೆ ತೊರೆದಿರುವ ಅದೆಷ್ಟೋ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕಂಡಿದ್ದೇವೆ. ಇದರಲ್ಲಿ 6 ಮಂದಿ ಆರೋಪಿಗಳಲ್ಲ 60 ಮಂದಿ ಇರಬಹುದು ಅವರನ್ನು ಕಂಬಿಯ ಹಿಂದೆ ತಳ್ಳುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕು. ಆರೋಪಿಗಳನ್ನು ಜಮಾತ್ ನಿಂದ ಹೊರಗಡೆ ಹಾಕಲು ಮೀನಾಮೇಷ ಎಣಿಸಬೇಕಿಲ್ಲ ತಕ್ಷಣವೇ ಹೊರಗೆ ಹಾಕಬೇಕು“ ಎಂದು ಆಗ್ರಹಿಸಿದರು.

ಮುಮ್ತಾಝ್ ಅಲಿ ಸಾವಿಗೆ ಕಾರಣನಾದ ಅಬ್ದುಲ್ ಸತ್ತಾರ್ ಜೈಲಿಂದ ಬರೋತನಕ ಕಾಯ್ಬೇಕು. ಅವನನ್ನು ಬದುಕಲು ಬಿಡಬಾರದು. ಆತ ನಾಗರಿಕ ಸಮಾಜದಲ್ಲಿರಲು ಯೋಗ್ಯನಲ್ಲ ಎಂದು ಕೆಪಿಸಿಸಿ ವಕ್ತಾರೆ ಪ್ರತಿಭಾ ಕುಳಾಯಿ ಹೇಳಿದ್ದಾರೆ.

ನಾವು ಇಂದು ಆತನನ್ನು ಬಿಟ್ಟರೆ ನಾಳೆಯ ದಿನ ಇನ್ನಷ್ಟು ಮಂದಿ ಕೂಳೂರು ಸೇತುವೆಯಿಂದ ಹಾರುವ ಸನ್ನಿವೇಶ ಬರಬಹುದು. ಆತನನ್ನು ಒಂದೊಮ್ಮೆ ನೀವು ಬಿಟ್ಟರೂ ನಾನು ಬಿಡುವುದಿಲ್ಲ. ಆತ ಜೈಲಿನಿಂದ ಹೊರಗೆ ಬರುವತನಕ ಕಾಯುತ್ತೇನೆ ಎಂದು ಗುಡುಗಿದ್ದಾರೆ.


ಸತ್ತಾರ್ ನನಗೆ ಕೊಟ್ಟಿರುವ ಹಿಂಸೆ ಇನ್ಯಾರಿಗೂ ಕೊಡುವುದು ಬೇಡ. ನಾನೊಬ್ಬ ಹಿಂದೂ ಮಹಿಳೆಯಾಗಿದ್ದಕ್ಕೆ ಆತನನ್ನು ಎದುರಿಸಿ ಇನ್ನೂ ಗಂಡ ಮಕ್ಕಳ ಜೊತೆಗೆ ಬದುಕಿದ್ದೇನೆ. ಆತ ನನ್ನಿಂದ ಪೆಟ್ಟು ತಿಂದ ಮೇಲೂ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ನನ್ನ ಹಿಂದೆ ಬಂದು ನಿಂತು ಫೋಟೋ ತೆಗೆಸಿ ಹಾಕುತ್ತಿದ್ದ. ಆತನಿಗೆ 5 ತಿಂಗಳ ಹಿಂದೆ ನಾನೇ ಎಚ್ಚರಿಕೆ ಕೊಟ್ಟಿದ್ದೇನೆ. ಇನ್ನೊಮ್ಮೆ ನನ್ನ ಹಿಂದೆ ಫೋಟೋದಲ್ಲಿ ಕಾಣಿಸಿಕೊಂಡರೆ ನಿನ್ನ ಕೈ ಕಡಿಯುವುದಲ್ಲ ಕತ್ತು ಕಡಿಯುವುದಾಗಿ ಹೇಳಿದ್ದೆ. ಅವತ್ತು ಹಿಂದೂ ಹೆಣ್ಣುಮಕ್ಕಳ ವಿಚಾರದಲ್ಲಿ ಆತನ ಕೈ ಕಡಿಯುವ ಬದಲು ತಲೆ ಕಡಿದಿದ್ದರೆ ಇಂದು ಮುಮ್ತಾಝ್ ಅಲಿಯಂತಹವರು ಸಾಯುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.



Join Whatsapp