ತೆಗೆದು ಹಾಕಲಾದ ಸಿಲೆಬಸ್‌ಗಳಿಂದ ಪ್ರಶ್ನೆಗಳನ್ನು ನೀಡಿದ ಈ ಬಾರಿಯ ಸಿಇಟಿ ಪರೀಕ್ಷೆಯನ್ನು ತಕ್ಷಣವೇ ರದ್ದುಪಡಿಸಿ ಪುನರ್ ಪರೀಕ್ಷೆ ನಡೆಸಬೇಕು. ಜೊತೆಗೆ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಜೆಡಿಎಸ್ ಮುಖಂಡ, ವಿಧಾನಪರಿಷತ್ ಸದಸ್ಯ ಭೋಜೇಗೌಡ ಆಗ್ರಹಿಸಿದ್ದಾರೆ.
ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಶಿಕ್ಷಣ ಕೋರ್ಸುಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಮಂಡಳಿ (ಕೆಇಎ) ನಡೆಸುವ ಪ್ರವೇಶ ಪರೀಕ್ಷೆ ಸಿಇಟಿ ಯಲ್ಲಿ ಸುಮಾರು 3 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ ನಾಲ್ಕು ಪರೀಕ್ಷೆಗಳಲ್ಲಿ ಅಂದರೆ ಜೀವಶಾಸ್ತ್ರ ಮತ್ತು ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಲ್ಲಿ ಕೇಳಲಾಗಿರುವ 45ಕ್ಕಿಂತ ಹೆಚ್ಚು ಪಶ್ನೆಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯು ಪಠ್ಯ ಪುಸ್ತಕದಿಂದ ತೆಗೆದು ಹಾಕಿರುವ ಅಧ್ಯಾಯದಿಂದ ಕೇಳಲಾಗಿದೆ. ಈ ಮೂಲಕ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮೆರೆದಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ವರ್ಷ ಪರೀಕ್ಷೆಯಲ್ಲಿ ಶೇ. 45 ರಷ್ಟು ಪ್ರಶ್ನೆಗಳ ಬಗ್ಗೆ ಕೆಇಎ ತಕ್ಷಣವೇ ಸ್ಪಷ್ಟಿಕರಣ ನೀಡಬೇಕು. ಇದು ಕೆಇ ಇಲಾಖೆ ಹಾಗೂ ಸರಕಾರದ ಕರ್ತವ್ಯ. ಸರ್ಕಾರ ತಕ್ಷಣ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಜೊತೆಗೆ ಸಿಲೆಬಸ್ ನಲ್ಲಿರುವ ಪಠ್ಯಗಳನ್ನು ಆಧರಿಸಿ ಪುನರ್ ಪರೀಕ್ಷೆಗೆ ದಿನಾಂಕ ನಿಗಧಿ ಮಾಡಬೇಕು ಎಂದು ಭೋಜೇಗೌಡ ಆಗ್ರಹಿಸಿದ್ದಾರೆ.