ಬೆಂಗಳೂರು: ಕಳೆದ ವರ್ಷ ರಾಜ್ಯದಲ್ಲಿ ಈ ಅವಧಿಯಲ್ಲಿ 25 ಸಾವಿರ ಡೆಂಗ್ಯೂ ಪ್ರಕರಣಗಳಿದ್ದು, ಈ ಬಾರಿ 68 ಸಾವಿರ ಪ್ರಕರಣ ವರದಿಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬಿಜೆಪಿ ಧನಂಜಯ ಸರ್ಜಿ ಪರವಾಗಿ ಅರುಣ್ ಕುಮಾರ್ ಕೇಳಿದ ಪ್ರಶ್ನೆಗೆ ಸಚಿವರು ಹೀಗೆ ಉತ್ತರಿಸಿದ್ದಾರೆ.
ಡೆಂಗ್ಯೂ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದ ಅವರು, ಎಲ್ಲ ಇಲಾಖೆಯು ಇದರಲ್ಲಿ ಪಾಲ್ಗೊಂಡು ಜಾಗೃತಿ ಮೂಡಿಸಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದೇವೆ. ಅಧಿಕೃತ ಮಾಹಿತಿ ನೀಡುತ್ತಿದ್ದೇವೆ, ಮಾಹಿತಿ ಮುಚ್ಚಿಹಾಕುವ ಕೆಲಸ ಮಾಡಿಲ್ಲ ಎಂದರು.
ಡೆಂಗ್ಯೂ ತಗುಲಿದ ಮನೆಗಳಿಗೆ ಹೋಗಿ ಬೇರೆಯವರಿಗೂ ಸೋಂಕು ಬಂದಿದ್ಯಾ ಎಂದು ತಪಾಸಣೆ ಮಾಡುತ್ತಿದ್ದೇವೆ. 2 ಪ್ರಕರಣ ಬಂದರೆ ಹಾಟ್ ಸ್ಪಾಟ್ ಎಂದು ಪರಿಗಣಿಸಿ ಕೋವಿಡ್ ಮಾದರಿಯಲ್ಲಿ ಸುತ್ತಮುತ್ತಲಿನ ಪ್ರದೇಶದ ಜನರನ್ನು ತಪಾಸಣೆ ಮಾಡಿಸುತ್ತಿದ್ದೇವೆ ಎಂದರು.
ಡೆಂಗ್ಯೂ ಜ್ವರ ಬಂದವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡ್ತಿದ್ದೇವೆ ಎಂದೂ ಸಚಿವರು ಹೇಳಿದರು.