ಕೊಲ್ಲಂ : ‘ಕೊರೊನಾ’ ಇಡೀ ಜಗತ್ತಿನಲ್ಲಿ ಲಕ್ಷಾಂತರ ಜನರನ್ನು ಬಲಿ ಪಡೆದು, ಭಯಭೀತಿ ಮೂಡಿಸಿದ್ದರೆ, ಇಲ್ಲೊಬ್ಬರು ‘ಕೊರೊನಾ’ ನನಗೇ ವೋಟು ಹಾಕಿ, ನಿಮ್ಮ ಸೇವೆ ಮಾಡುತ್ತೇನೆ ಎಂದು ಪ್ರೀತಿಯಿಂದ ಕೇಳಿಕೊಳ್ಳುತ್ತಿದ್ದಾರೆ. ಹೌದು, ಕೇರಳದ ಕೊಲ್ಲಂ ಕಾರ್ಪೊರೇಶನ್ ನ ಮದಿಲಿಲ್ ವಿಭಾಗದ ಬಿಜೆಪಿ ಅಭ್ಯರ್ಥಿಯಾಗಿ 24ರ ಹರೆಯದ ಕೊರೊನಾ ಥಾಮಸ್ ಚುನಾವಣಾ ಕಣಕ್ಕಿಳಿದಿದ್ದಾರೆ.
ಕೊರೊನಾ ಥಾಮಸ್ ಕಳೆದ ಅಕ್ಟೋಬರ್ ನಲ್ಲಿ ಕೊರೊನಾ ಸೋಂಕಿತೆಯಾಗಿಯೂ, ಮಗುವೊಂದಕ್ಕೆ ಜನ್ಮ ನೀಡಿದ್ದ ಬಗ್ಗೆ ದೊಡ್ಡ ಮಟ್ಟದ ಸುದ್ದಿಯಾಗಿದ್ದರು. ಮಗು ಮತ್ತು ತಾಯಿ ಕೊರೊನಾದಿಂದ ಗುಣಮುಖರಾಗಿದ್ದಾರೆ.
ಇದೀಗ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಾರ್ಪೊರೇಶನ್ ಚುನಾವಣೆಗೆ ಕಣಕ್ಕಿಳಿದಿದ್ದಾರೆ. ಕೊರೊನಾರ ಪತಿ ಜಿನು ಸುರೇಶ್ ಬಿಜೆಪಿಯ ಸಕ್ರಿಯ ಕಾರ್ಯಕರ್ತ. ಹೀಗಾಗಿ ಅವರು ಈ ಚುನಾವಣೆಯಲ್ಲಿ ಕೊರೊನಾ ಸ್ಪರ್ಧಿಸಲು ಆಸಕ್ತಿ ತೋರಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ತನ್ನನ್ನು ತಾನು ಕೊರೊನಾ ಎಂದು ಪರಿಚಯಿಸಿಕೊಳ್ಳುವಾಗ, ವಿಶೇಷವಾಗಿ ಹಿರಿಯರು ಸೇರಿದಂತೆ ಎಲ್ಲರೂ ಒಂದು ಬಾರಿ ಆಕೆಯ ಮುಖ ನೋಡುತ್ತಾರಂತೆ. ಆಗ ಅವರು, “ನೀವೆಲ್ಲಾ ಕೊರೊನಾದ ಬಗ್ಗೆ 8 ತಿಂಗಳ ಹಿಂದೆ ಕೇಳಿರಬಹುದು ಅಷ್ಟೇ, ಆದರೆ ನನ್ನ ತಂದೆ 24 ವರ್ಷಗಳ ಹಿಂದೆ ನನಗೆ ಈ ಹೆಸರು ಇಟ್ಟಿದ್ದಾರೆ’’ ಎಂದು ಹೇಳುತ್ತಾರಂತೆ. ತನ್ನ ಜನಸೇವಾ ಆಸಕ್ತಿಯನ್ನು ತಿಳಿಸಿದ ಬಳಿಕ, ಎಲ್ಲರೂ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಕೊರೊನಾ ತಿಳಿಸಿದ್ದಾರೆ.
ಕಲಾವಿದ ಥಾಮಸ್ ಮ್ಯಾಥ್ಯೂ ಅವರಿಗೆ 24 ವರ್ಷಗಳ ಹಿಂದೆ ಅವಳಿ ಜವಳಿ ಮಕ್ಕಳು ಹುಟ್ಟಿದ್ದರು. 20 ನಿಮಿಷ ಮೊದಲು ಹುಟ್ಟಿದ ಗಂಡು ಮಗುವಿಗೆ ಕೊರಲ್ ಮತ್ತು ಹೆಣ್ಣು ಮಗುವಿಗೆ ಕೊರೊನಾ ಎಂದು ಹೆಸರಿಟ್ಟಿದ್ದರು. ಮುಂದೆ ಇದೇ ಹೆಸರು ಇಷ್ಟು ದೊಡ್ಡ ಅವಾಂತರ ಸೃಷ್ಟಿಸುತ್ತದೆ ಎಂದೆಂದಿಗೂ ಅವರು ಯೋಚಿಸಿರಲಿಕ್ಕಿಲ್ಲ.