ಈ ಬಾರಿಯ ಬಜೆಟ್ ರೈತರು, ಬಡವರ ಜನಪರವಾಗಿರುತ್ತದೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

Prasthutha|

- Advertisement -

ಹಾವೇರಿ: ಈ ವರ್ಷದ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ, ಜನಪರವಾಗಿರುತ್ತದೆ. ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಹೇಳಿದರು.

- Advertisement -

ಶಿಗ್ಗಾಂವನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಶಿಗ್ಗಾಂವ ಸವಣೂರು ಕ್ಷೇತ್ರದ ಜನತೆ ಬಹಳ ದೊಡ್ಡ ಪ್ರಮಾಣದಲ್ಲಿ ಸೇರಿ ನನ್ನ ಹುಟ್ಟುಹಬ್ಬವನ್ನು ಆಚರಣೆ ಮಾಡಿ ಹಾರೈಸಿದ್ದಾರೆ. ಅವರ ಆಶೀರ್ವಾದದಿಂದ ನಾನು ಇವತ್ತು ರಾಜ್ಯದಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ. ಅದಕ್ಕಾಗಿ ನನ್ನ ಕ್ಷೇತ್ರದ ಜನತೆಗೆ ವಿಶೇಷವಾದ ಕೋಟಿ ಕೋಟಿ ನಮನಗಳನ್ನು, ಕೃತಜ್ಞತೆಯನ್ನು ಹೇಳುತ್ತೇನೆ.

ಈ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ತೆಗೆದುಕೊಂಡಾಗ 5 ಸಾವಿರ ಕೋಟಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ.‌ 72 ಸಾವಿರ ಕೋಟಿ ಸಾಲ ತೆಗೆದುಕೊಳ್ಳುವ ಅವಕಾಶ ಇದ್ದರೂ ನಾವು ಕೇವಲ 61 ಸಾವಿರ ಕೋಟಿಗೆ ಮಿತಿಗೊಳಿಸಿದ್ದೇವೆ.‌ ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ. ನಾವು ಈ ವರ್ಷ 61 ಸಾವಿರಕ್ಕೆ ಮಿತಿಗೊಳಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದರು.

ಹತ್ತು ಹಲವಾರು ವರ್ಷಗಳಿಂದ ಸರ್ಕಾರಗಳು ಮಾಡಿರುವ ಸಾಲವನ್ನು ತೀರಿಸುವ ಹೊಣೆಗಾರಿಕೆ ನಮ್ಮ ಮೇಲೆ ಇದೆ. ಕೇವಲ 9% ರಾಜ್ಯದ ಅಭಿವೃದ್ಧಿ ಆಗುತ್ತಿದೆ. ಅದರ ಗತಿಯನ್ನಿಟ್ಟುಕೊಂಡು ಸಾಮಾಜಿಕವಾಗಿ ಅಭಿವೃದ್ಧಿ ಮಾಡಿ ಸಮತೋಲನ ಮಾಡಿಕೊಳ್ಳುವ ಅವಶ್ಯಕತೆಯಿದೆ. ಮುಂದಿನ ಎರಡು, ಮೂರು ವರ್ಷ ಸಮತೋಲನ ಕಾಪಾಡಿಕೊಂಡರೆ ಇನ್ನಷ್ಟು ಆದಾಯ ಬರುವ ನಿರೀಕ್ಷೆಯಿದೆ.

ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯವನ್ನು ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಈ ವರ್ಷ 8101 ಶಾಲಾ ಕಟ್ಟಡ ನಿರ್ಮಾಣಕ್ಕೆ ಕ್ರಮ ತೆಗೆದುಕೊಂಡಿದ್ದೇವೆ. ಅವೆಲ್ಲವೂ ಮೇ, ಜೂನ್ ವೇಳೆಗೆ ನಿರ್ಮಾಣ ಆಗುತ್ತವೆ. ಅದೇ ವೇಗವನ್ನು ಮುಂದಿನ ದಿನಗಳಲ್ಲಿ ಮುಂದುವರಿಸಿಕೊಂಡು ಹೋಗುತ್ತೇವೆ. ಆರೋಗ್ಯ ಕ್ಷೇತ್ರದಲ್ಲಿ ನಾವು ಪ್ರಗತಿಯಲ್ಲಿ ಹೋಗುತ್ತಿದ್ದೇವೆ. ನಮ್ಮ ಪ್ರಾತಿನಿಧ್ಯ ಆರೋಗ್ಯ, ಶಿಕ್ಷಣದ ಮತ್ತು ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲದಕ್ಕೂ ಇರುತ್ತದೆ.

ಚುನಾವಣೆಯ ಪ್ರಭಾವ ಬಜೆಟ್ ಮೇಲೆ ಇರುತ್ತದೆ. ನಾವು ಕೋವಿಡ್ ನಂತರದಲ್ಲಿ ಏನು ಆರ್ಥಿಕವಾಗಿ ಮುಂದೆ ಹೋಗುತ್ತಿದ್ದೇವೆ. ಅದನ್ನು ಮುಂದುವರೆಸಿಕೊಂಡು ಹೋಗುವುದು ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಬಹಳ ಮುಖ್ಯ. ಆರ್ಥಿಕ ಶಿಸ್ತು ತಂದು ರಾಜ್ಯದ ಹಿತದೃಷ್ಟಿಯನ್ನು ನಮ್ಮ ಗಮನದಲ್ಲಿಟ್ಟುಕೊಂಡಿದ್ದೇವೆ ಎಂದರು.

ಶಿಗ್ಗಾಂವ ಮತ್ತು ಸವಣೂರು ಕ್ಷೇತ್ರದ ಅಭಿವೃದ್ಧಿಗೆ ಪಣ :

ರಾಜ್ಯದಲ್ಲಿ ಒಂದು ಮಾದರಿ ಕ್ಷೇತ್ರವನ್ನಾಗಿ ಶಿಗ್ಗಾಂವ ಮತ್ತು ಸವಣೂರು ಮಾಡಲು ನಾನು ಪಣ ತೊಟ್ಟಿದ್ದು, ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶಿಕ್ಷಣ, ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನಾನು ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಿದ್ದೇನೆ ಎಂದರು.

ಅಮಿತ್ ಶಾ ಭೇಟಿ ಉಕ ಭಾಗದಲ್ಲಿ ಬಜೆಪಿ ಅಲೆ ಹೆಚ್ಚಿಸಿದೆ :

ಕಿತ್ತೂರು ಕರ್ನಾಟಕ ಭಾಗಕ್ಕೆ‌ ಅಮಿತ ಶಾ ಅವರು ನೀಡಿದ ಭೇಟಿಯಿಂದ ಅಲೆ ಹೆಚ್ಚಿಸಿದೆ.ಉತ್ತರ ಕರ್ನಾಟಕ ಭಾಗದಲ್ಲಿ ಈ ಅಲೆ ಸುನಾಮಿಯಾಗಿ, ನಾವು ಕಳೆದ ಭಾರಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸೀಟು ಗೆಲ್ಲುತ್ತೇವೆ ಎಂದರು.



Join Whatsapp