ತಿರುವನಂತಪುರಂ| ಟೀಮ್‌ ಇಂಡಿಯಾ vs ದಕ್ಷಿಣ ಆಫ್ರಿಕಾ ಮೊದಲ ಟಿ20 ಹಣಾಹಣಿ

ತಿರುವನಂತಪುರಂ: ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿ ಗೆದ್ದ ಹುಮ್ಮಸ್ಸಿನಲ್ಲಿರುವ ಟೀಮ್‌ ಇಂಡಿಯಾ, ಬುಧವಾರದಿಂದ ಆರಂಭವಾಗಲಿರುವ ಟಿ20 ಸರಣಿಯಲ್ಲಿ ದಕ್ಷಿಣ ಅಫ್ರಿಕಾ ತಂಡವನ್ನು ಎದುರಿಸಲಿದೆ. 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ತಿರುವನಂತಪುರಂನಲ್ಲಿ ಇಂದು ನಡೆಯಲಿದೆ.

ವಿರಾಟ್‌ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ಮತ್ತು ಸೂರ್ಯಕುಮಾರ್‌ ಯಾದವ್‌ ಭರ್ಜರಿಯಾಗಿ ಬ್ಯಾಟ್‌ ಬೀಸುತ್ತಿರುವುದು ಭಾರತದ ಬ್ಯಾಟಿಂಗ್‌ ವಿಭಾಗಕ್ಕೆ ಮತ್ತಷ್ಟು ಬಲತುಂಬಿದೆ. ಆದರೆ ಡೆತ್‌ ಬೌಲಿಂಗ್‌ನಲ್ಲಿ ಬೌಲರ್‌ಗಳು ದುಬಾರಿಯಾಗುತ್ತಿರುವುದು ಆತಂಕ ಮೂಡಿಸಿದೆ.

- Advertisement -

ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯದಲ್ಲಿ ಟಿ20 ವಿಶ್ವಕಪ್‌ ಟೂರ್ನಿಗೆ ಸಿದ್ಧರಾಗಲು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟಿ20 ಪಂದ್ಯಗಳು ಭಾರತಕ್ಕೆ ಮಹತ್ವದ್ದಾಗಿದೆ. ಆದರೆ ತಂಡದ ಮಧ್ಯಮ ಕ್ರಮಾಂಕದಲ್ಲಿನ ಗೊಂದಲ ಮತ್ತು ಪ್ರಮುಖ ಬೌಲರ್‌ಗಳ ನೀರಸ ಪ್ರದರ್ಶನ ಟೀಮ್‌ ಇಂಡಿಯಾ ಪಾಳಯದಲ್ಲಿ ಆತಂಕ ಉಂಟುಮಾಡಿದೆ.

ಪ್ರಮುಖ ಬೌಲರ್‌ಗಳಾದ ಜಸ್‌ಪ್ರೀತ್‌ ಬುಮ್ರಾ ಮತ್ತು ಹರ್ಷಲ್‌ ಪಟೇಲ್‌, ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದರೂ ಸಹ, ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ದುಬಾರಿಯಾಗಿದ್ದರು. ಮತ್ತೊಂದೆಡೆ ಕೋವಿಡ್‌ನಿಂದ ಚೇತರಿಸಿಕೊಳ್ಳದ ಅನುಭವಿ ಮುಹಮ್ಮದ್‌ ಶಮಿ, ಆಫ್ರಿಕಾ ವಿರುದ್ಧದ ಸರಣಿಯಿಂದಲೂ ಹೊರಗುಳಿಯಲಿದ್ದಾರೆ. ವಿಶ್ವಕಪ್‌ಗೆ ತಂಡವನ್ನು ಸಿದ್ಧಪಡಿಸಲು ರೋಹಿತ್‌-ದ್ರಾವಿಡ್‌ ಜೋಡಿಗೆ ಬೌಲಿಂಗ್‌ ವಿಭಾಗದ್ದೆ ತಲೆನೋವಾಗಿದೆ. ಆಫ್ರಿಕಾ ವಿರುದ್ಧ ಅರ್ಷದೀಪ್‌ ಸಿಂಗ್‌ ಕಣಕ್ಕಿಳಿಯುವ ಸಾಧ್ಯತೆ ಇದೆ.

ಮತ್ತೊಂದೆಡೆ ಪ್ರಮುಖ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯಾಗೆ ಆಫ್ರಿಕಾ ವಿರುದ್ಧದ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ವಿಕೆಟ್‌ ಕೀಪರ್‌ ಸ್ಥಾನಕ್ಕೆ ರಿಷಭ್‌ ಪಂತ್‌ ಮತ್ತು ದಿನೇಶ್‌ ಕಾರ್ತಿಕ್‌ ಮಧ್ಯೆ ಏರ್ಪಟ್ಟಿರುವ ಸ್ಪರ್ಧೆಗೆ ಇನ್ನೂ ಉತ್ತರ ಕಂಡುಕೊಳ್ಳಲಾಗಿಲ್ಲ.  

ದಕ್ಷಿಣ ಆಫ್ರಿಕಾ ವಿರುದ್ಧ ತಾಯ್ನೆಲದಲ್ಲಿ ಭಾರತ ಇದುವರೆಗೂ ಟಿ20 ಸರಣಿ ಗೆದ್ದಿಲ್ಲ. ಕಳೆದೆರಡು ಸರಣಿಗಳು ಡ್ರಾದಲ್ಲಿ ಕೊನೆಗೊಂಡಿದ್ದವು.

- Advertisement -