ಶಿವಮೊಗ್ಗ: ನಾಡಗೀತೆಯನ್ನು ಅಪಮಾನಿಸಿದ ರೋಹಿತ್ ಚಕ್ರತೀರ್ಥನ ವಿರುದ್ಧ ತೀರ್ಥಹಳ್ಳಿಯ ಕೊಪ್ಪ ವೃತ್ತದಲ್ಲಿರುವ ಕುವೆಂಪು ಪ್ರತಿಮೆ ಎದುರು ಕುವೆಂಪು ಅಭಿಮಾನಿಗಳು ಪ್ರತಿಭಟನೆ ನಡೆಸಿ ಚಕ್ರತೀರ್ಥ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಕಡೆಗೋಲು ವಿಚಾರ ಮಂಥನ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುವೆಂಪು ಸಾಹಿತ್ಯ ಮತ್ತು ರಾಷ್ಟ್ರೀಯತೆ ಎಂಬ ವಿಷಯದ ಬಗ್ಗೆ ಮುಖ್ಯ ಭಾಷಣ ಮಾಡಲು ಬಂದಿದ್ದ ರೋಹಿತ್ ಚಕ್ರತೀರ್ಥನಿಗೆ ಕುವೆಂಪು ಬಗ್ಗೆ ಮಾತನಾಡಲು ಅವಕಾಶ ನೀಡಬಾರದು. ಕುವೆಂಪು ಅವರನ್ನು ಅವಮಾನಿಸುವ ಮೂಲಕ ಆತ ವಿಕೃತಿ ಮೆರೆದಿದ್ದಾನೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ರೋಹಿತ್ ಚಕ್ರತೀರ್ಥನನ್ನು ಕರೆತರುತ್ತಿರುವವರು ರಾಷ್ಟ್ರ ಕವಿ ಕುವೆಂಪು ಮತ್ತು ತೀರ್ಥಹಳ್ಳಿಗೆ ಮಾಡುತ್ತಿರುವ ಅವಮಾನವಾಗಿದೆ. ಸರ್ಕಾರದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿದ್ದ ಸಂಘ ಪರಿವಾರದ ಈ ವ್ಯಕ್ತಿ ದೇಶದ ಹೋರಾಟಗಾರರ ಬಗ್ಗೆ, ಕನ್ನಡ ಸಾಹಿತಿಗಳ ಬಗ್ಗೆ ಗೌರವ ಇಲ್ಲದವರು ಎಂದು ಆರೋಪಿಸಿದರು.
ಕುವೆಂಪು, ನಾರಾಯಣ ಗುರುಗಳು ಮತ್ತು ನಾಡಗೀತೆಯನ್ನು ಒಳಉಡುಪಿಗೆ ಹೋಲಿಸಿರುವ ರೋಹಿತ್ ಚಕ್ರ ತೀರ್ಥರನ್ನೇ ಉದ್ದೇಶಪೂರ್ವಕವಾಗಿ “ಕುವೆಂಪು ಸಾಹಿತ್ಯ ಮತ್ತು ರಾಷ್ಟ್ರೀಯತೆ ” ಕುರಿತಂತೆ ಮಾತಾಡಲು ಆಹ್ವಾನಿಸಿರುವುದು ನಿಜಕ್ಕೂ ನಾಚಿಕೆಗೇಡು ಎಂದು ಹೇಳಿದರು.
ಪ್ರಗತಿಪರ ಹೋರಾಟಗಾರ ಕೆ.ಪಿ.ಶ್ರೀಪಾಲ್ ಮಾತನಾಡಿ, ಸಂಘ ಪರಿವಾರದ ಬಿಜೆಪಿಯ ಏಜೆಂಟ್ ಆಗಿರುವ ಈತ ಕನ್ನಡ ನಾಡು ನುಡಿಗೆ ಮಾಡಿದ ಅಪಮಾನ ಅಕ್ಷಮ್ಯ ಅಪರಾಧವಾಗಿದೆ ಎಂದು ಹೇಳಿದರು.
ಈ ಪ್ರತಿಭಟನೆಯಲ್ಲಿ ಚಿಂತಕ ದೇವರಾಜ್ ನೆಂಪೆ, ಒಕ್ಕಲಿಗರ ಸಂಘದ ಅಧ್ಯಕ್ಷ ಪ್ರಭಾಕರ್, ಆದರ್ಶ ಹುಂಚದ ಕಟ್ಟೆ, ನಾಗರಾಜ್ ಪೂಜಾರಿ, ಕರವೇಯ ವೆಂಕಟೇಶ್ ಹೆಗಡೆ, ಹರ್ಷೇಂದ್ರ ಕುಮಾರ್, ಪೂರ್ಣೇಶ್ ಕೆಳಕೆರೆ, ಮಹಾಬಲೇಶ್,ಕಸಾಪದ ಗಾಯತ್ರಿ ಶೇಷ್ ಗಿರಿ,ಮುಂತಾದವರಿದ್ದರು.