ಉತ್ತರಪ್ರದೇಶ : ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಫೆ.3ರಂದು ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತ್ವ್ ಪೊಲೀಸರು ಇನ್ನೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಗುಂಡಿನ ದಾಳಿ ನಡೆಸಿದ್ದ ಪ್ರಮುಖ ಆರೋಪಿ ಸಚಿನ್ ಶರ್ಮಾಗೆ ಈತ ಅಕ್ರಮವಾಗಿ ಮಾರಕಾಸ್ತ್ರಗಳ ಸರಬರಾಜು ಮಾಡಿದ್ದ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ. ಎಐಎಂಐಎಂ ಮುಖ್ಯಸ್ಥ ಓವೈಸಿ ಫೆ.3ರಂದು ಉತ್ತರ ಪ್ರದೇಶದ ಮೀರತ್ನ ಕಿಥೌರ್ನಲ್ಲಿ ಚುನಾವಣಾ ಪ್ರಚಾರ ನಡೆಸಿ, ವಾಪಸ್ ದೆಹಲಿಗೆ ಹೋಗುವಾಗ ಛಜರ್ಸಿ ಟೋಲ್ ಪ್ಲಾಜಾ ಬಳಿ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. ಅದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸಚಿನ್ ಶರ್ಮಾ ಮತ್ತು ಶುಭಂ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಇದೀಗ ಮೂರನೇ ಆರೋಪಿಯನ್ನು ಬಂಧಿಸಿದ ಬಗ್ಗೆ ಮಾಹಿತಿ ನೀಡಿರುವ ಹಾಪುರ್ ಎಎಸ್ಪಿ ಸರ್ವೇಶ್ ಕುಮಾರ್ ಮಿಶ್ರಾ, ಇಂದು ಬಂಧಿತನಾದ ವ್ಯಕ್ತಿ ಸಚಿನ್ ಶರ್ಮಾಗೆ ಮಾರಕಾಸ್ತ್ರಗಳು, ಮದ್ದುಗುಂಡುಗಳನ್ನು ಕಾನೂನು ಬಾಹಿರವಾಗಿ ನೀಡುತ್ತಿದ್ದ. ಈತನ ವಿರುದ್ಧ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.