ಟ್ರಕ್ ಟಯರ್ ಎಂದು ಯುದ್ಧ ವಿಮಾನದ ಟಯರ್ ಅನ್ನೇ ಎಗರಿಸಿದ ಕಳ್ಳರು ! ಮುಂದೆ ನಡೆದದ್ದೇನು ?

Prasthutha|

ಲಕ್ನೋ: ಟ್ರಕ್‌ನ ಟಯರ್ ಎಂದು ತಪ್ಪಾಗಿ ಗ್ರಹಿಸಿ ಭಾರತೀಯ ವಾಯುಪಡೆಯ ಪಡೆಗೆ ಸೇರಿದ ಮಿರಾಜ್ 2000 ಯುದ್ಧ ವಿಮಾನದ ಟಯರ್ ಅನ್ನು ಎಗರಿಸಿದ್ದಾರೆ. ಟಯರ್ ಕಳವುಗೊಂಡ ಪರಿಣಾಮ ಪೊಲೀಸರು ಮತ್ತು ವಾಯುಪಡೆ ಪೊಲೀಸರು ಕಳ್ಳರ ಪತ್ತೆಗೆ ನಿಗಾ ವಹಿಸಿದ್ದರು. ಆದರೆ ಪೊಲೀಸರು ಪ್ರಕರಣವನ್ನು ಬೇಧಿಸುವ ಮುನ್ನವೇ ಕಳ್ಳರು ಟಯರ್ ಸಹಿತ ವಾಯುಸೇನೆ ಠಾಣೆಯಲ್ಲಿ ಶರಣಾಗತಿಯಾಗಿದ್ದಾರೆ.

- Advertisement -

ಇಬ್ಬರು ಕಳ್ಳರನ್ನು ದೀಪರಾಜ್ ಮತ್ತು ಹಿಮಾಂಶು ಎಂದು ಗುರುತಿಸಲಾಗಿದ್ದು ಟಯರ್  ಕದ್ದ  ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ. ಕಳವುಗೈದ ಟಯರ್ ಅನ್ನು  ಮಿರಾಜ್ ಯುದ್ಧ ವಿಮಾನದ ಟಯರ್ ಎಂದು ತಿಳಿದಿರಲಿಲ್ಲ. ಟ್ರಕ್‌ನ ಟಯರ್ ಎಂದು ತಪ್ಪಾಗಿ ಗ್ರಹಿಸಿ ಮನೆಗೆ ತೆಗೆದುಕೊಂಡು ಹೋಗಿದ್ದೇವೆ ಎಂದು ಕಳ್ಳರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನವೆಂಬರ್ 26 ರ ರಾತ್ರಿ ಶಹೀದ್ ಪಥದಲ್ಲಿ ನಮಗೆ ಟಯರ್ ಕಾಣಿಸಿತ್ತು. ಇದನ್ನು ನಾವು ಟ್ರಕ್ ಟಯರ್ ಎಂದು ಮನೆಗೆ ತೆಗೆದುಕೊಂಡು ಹೋದೆವು ಎಂದು ಇಬ್ಬರೂ ಪೊಲೀಸರೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ನಾವು ಕದ್ದ ಟಯರ್ ಇತರ ಟಯರ್ ಗಳಿಗಿಂತ ಸ್ವಲ್ಪ ಭಿನ್ನವಾಗಿತ್ತು, ಯಾವ ಕಾರಿಗೆ ಇದು ಸೇರಿದೆ ಎಂದು ನಮಗೆ ತಿಳಿದಿರಲಿಲ್ಲ. ಮಿರಾಜ್‌ ಯುದ್ಧ ವಿಮಾನದ ಟೈರ್ ಕಳ್ಳತನವಾಗಿರುವ ಸುದ್ದಿಯನ್ನು ಡಿಸೆಂಬರ್ 3 ರಂದು ನೋಡಿದ್ದೇವೆ, ನಾವು ಕದ್ದಿರುವ ಟಯರ್ ಇದೇ ಎಂದು ತಿಳಿದಾಗ ಗಾಬರಿಗೊಂಡೆವು. ಅದರಂತೆ ಇದೀಗ ಟಯರ್ ಸಮೇತ ಏರ್ ಫೋರ್ಸ್ ಸ್ಟೇಷನ್ ಗೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ.

- Advertisement -

ನವೆಂಬರ್ 26 ರ ಸಂಜೆ ಜೋಧ್‌ಪುರಕ್ಕೆ ವಾಯುಪಡೆಗೆ ಸಂಬಂಧಿಸಿದ ವಸ್ತುಗಳನ್ನು ಟ್ರಕ್ ಮೂಲಕ ಸಾಗಿಸಲಾಗುತ್ತಿತ್ತು , ಯುದ್ಧ ವಿಮಾನದ 5 ಟಯರ್‌ಗಳ ಪೈಕಿ ಒಂದು ಟಯರ್ ಅನ್ನು ಕಳ್ಳರು ಕಳವುಗೈದಿದ್ದರು, ಈ ಸಂಬಂಧ ಡಿಸೆಂಬರ್ ಒಂದರಂದು ಆಶಿಯಾನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Join Whatsapp