ಬೆಂಗಳೂರು: ನಾನು ಯಾವುದೇ ತಪ್ಪು ಮಾಡಿಲ್ಲ, ಮುಂದೆ ಮಾಡುವುದಿಲ್ಲ. ರಾಜಕೀಯ ದುರುದ್ದೇಶದಿಂದ ಇದನೆಲ್ಲ ಮಾಡ್ತಿದ್ದಾರೆ. ನನ್ನನ್ನು ರಾಜಕೀಯವಾಗಿ ಮುಗಿಸಿದರೆ, ಇಡೀ ಕಾಂಗ್ರೆಸ್ ಮುಗಿಸಿದಂಗಾಗುತ್ತೆ ಅಂತಾ ಟಾರ್ಗೆಟ್ ಮಾಡ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡುತ್ತಿದ್ದಂತೆ ಬಿಜೆಪಿ ಸಿಎಂ ರಾಜಿನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದೆ. ಈ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನನ್ನು ರಾಜಕೀಯವಾಗಿ ಮುಗಿಸಿದ್ರೆ, ಇಡೀ ಕಾಂಗ್ರೆಸ್ ಮುಗಿಸಿದಂಗಾಗುತ್ತೆ ಅಂತಾ ಟಾರ್ಗೆಟ್ ಮಾಡ್ತಿದ್ದಾರೆ ಎಂದು ತಿಳಿಸಿದರು. ಇನ್ನು ಇದೇ ವೇಳೆ ಮಾನಸಿಕವಾಗಿ ನೀವು ಡಲ್ ಆಗಿದ್ದೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ, ನಾನು ಡಲ್ ಆಗಿಲ್ಲ, ಇನ್ನೂ ಸ್ಟ್ರಾಂಗ್ ಆಗಿದ್ದೇನೆ ಎಂದರು.
ರಾಜ್ಯಪಾಲರ ಆದೇಶ ಪ್ರಶ್ನೆ ಮಾಡಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದೇವೆ. ಪ್ರಾಸಿಕ್ಯೂಷನ್ ಗೆ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದೇವೆ. ಬೆಂಗಳೂರಿಗೆ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಬರುತ್ತಿದ್ದಾರೆ. ನ್ಯಾಯಾಲಯದ ಮೇಲೆ ನನಗೆ ಸಂಪೂರ್ಣ ವಿಶ್ವಾಸ ಇದೆ. 40 ವರ್ಷದ ರಾಜಕೀಯ ಜೀವನದಲ್ಲಿ ಯಾವ ಕಪ್ಪುಚುಕ್ಕೆ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ನಾನು ಯಾವತ್ತೂ ತಪ್ಪು ಮಾಡಿಲ್ಲ, ಮಾಡೋದೂ ಇಲ್ಲ. ಮಸಿ ಬಳಿಯಬೇಕು ಅಂತಾ ಈ ರೀತಿ ಆರೋಪ ಮಾಡ್ತಿದ್ದಾರೆ. ರಾಜಕೀಯ ದುರುದ್ದೇಶದಿಂದ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.