ಪುಣೆ: ದಕ್ಷಿಣ ಭಾರತದ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಮತ್ತು ಇತರೆ ಕಡೆಗಳಲ್ಲಿ ವೇಗವಾಗಿ ಬೆಳೆಯುತ್ತಿರುವ PFI ನ ಪ್ರಭಾವವನ್ನು ಎದುರಿಸುವ ಅಗತ್ಯವಿದ್ದು, ಇದಕ್ಕಾಗಿ ಆರೆಸ್ಸೆಸ್ ಸಂಘವು ಪರ್ಯಾಯ ಯೋಜನೆಗಳನ್ನು ರೂಪಿಸಲು ಮುಂದಾಗಿದೆ ಎನ್ನಲಾಗಿದೆ.
PFI ಸಂಘಟನೆಯ ಪ್ರಭಾವವನ್ನು ಸಾರ್ವಜನಿಕ ವಲಯದಲ್ಲಿ ವ್ಯಾಪಿಸದಂತೆ ತಡೆಯಲು ಮುಂದಾಗಿರುವ ಆರೆಸ್ಸೆಸ್, ದಕ್ಷಿಣ ಭಾರತದಲ್ಲಿ ABVPಯ ನೆಲೆಯನ್ನು ವಿಸ್ತರಿಸುವುದು ಮತ್ತು PFIಯೊಂದಿಗೆ ಕೈಜೋಡಿಸದ ಮತ್ತು PFIಯೊಂದಿಗೆ ಹೊಂದಿಕೆಯಾಗದ ಮುಸ್ಲಿಮ್ ಸಮುದಾಯದೊಳಗಿನ ಪಂಗಡಗಳನ್ನು ತಲುಪುವುದು ಮತ್ತು ಆ ಮೂಲಕ ಅವರೊಳಗಿನ ಭಿನ್ನಮತದ ಲಾಭ ಪಡೆಯುವುದು ಸೇರಿದಂತೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಆಂಗ್ಲ ಪತ್ರಿಕೆ ‘ಇಂಡಿಯನ್ ಎಕ್ಸ್’ಪ್ರೆಸ್’ ವರದಿ ತಿಳಿಸಿದೆ.
PFI ಸಂಘಟನೆಯ ವಿದ್ಯಾರ್ಥಿ ಸಂಘಟನೆಯಾಗಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿ.ಎಫ್.ಐ) ಕರ್ನಾಟಕದಲ್ಲಿ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೆರವಾಗಿ, ಅದನ್ನೊಂದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಯಶಸ್ವಿಯಾಗಿದೆ ಎಂಬುವುದು ಆರೆಸ್ಸೆಸ್ ನ ವಾದವಾಗಿದೆ. ಹಿಜಾಬ್ ಪರ ಜನರ ಪ್ರಬಲ ಹೋರಾಟದ ಹಿಂದೆ PFI ಸಂಘಟಿತವಾಗಿ ಕಾರ್ಯನಿರ್ವಹಿಸಿದೆ ಎನ್ನುವುದನ್ನು RSS ಅರಿತುಕೊಂಡಿದೆ.
ಒಂದು ಕಾಲದಲ್ಲಿ ಕೇರಳಕ್ಕೆ ಸೀಮಿತವಾಗಿದ್ದ PFI ಸಂಘಟನೆಯು ಈಗ ಭಾರತದಾದ್ಯಂತ ವೇಗವಾಗಿ ಬೆಳಯುತ್ತಿದೆ. ಇದು ದಕ್ಷಿಣದ ಬಹುತೇಕ ಕ್ಯಾಂಪಸ್ ಗಳಲ್ಲಿ ಶಕ್ತವಾಗಿ ಕಾರ್ಯಾಚರಿಸುತ್ತಿದೆ ಮತ್ತು ಇದೀಗ ಉತ್ತರದ ಭಾರತದಲ್ಲೂ ನೆಲೆ ಕಂಡುಕೊಳ್ಳಲು ಪ್ರಾರಂಭಿಸಿದೆ. ಉತ್ತರ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿ.ಎ.ಎ) ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ PFI ಸಂಘಟನೆ ಪ್ರಮುಖ ಪಾತ್ರ ವಹಿಸಿತ್ತು. ಇದರಿಂದಾಗಿ PFI ಗೆ ಅಭೂತಪೂರ್ವ ಜನಬೆಂಬಲ ದೊರೆತಿದೆ ಎಂದು ಆರೆಸ್ಸೆಸ್ ತಿಳಿದುಕೊಂಡಿದೆ. ಅದರ ಪ್ರಭಾವವನ್ನು ಎದುರಿಸುವ ಅಗತ್ಯವಿದೆ ಎಂದು ಆರೆಸ್ಸೆಸ್ ಹಿರಿಯ ಮುಖಂಡರೊಬ್ಬರು ‘ಇಂಡಿಯನ್ ಎಕ್ಸ್’ಪ್ರೆಸ್’ ಗೆ ಪ್ರತಿಕ್ರಿಯಿಸಿದ್ದಾರೆ.
ಅಷ್ಟು ಮಾತ್ರವಲ್ಲ PFI ಸಂಘಟನೆಯು RSS ನ ಸಾಂಸ್ಥಿಕ ರಚನೆಯೊಂದಿಗೆ ಸೈದ್ಧಾಂತಿಕವಾಗಿ ಬದ್ಧತೆಯಿಂದ ಹೋರಾಡುತ್ತಿದೆ. ಇದು ಆರೆಸ್ಸೆಸ್ಸನ್ನು ಇನ್ನಷ್ಟು ಚಿಂತೆಗೀಡುಮಾಡಿದೆ. PFI ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಜನರ ಪ್ರಭಾವವನ್ನು ಗಳಿಸಿಕೊಂಡಿದೆ. ಅವರು ಕ್ಯಾಂಪಸ್ ಗಳಲ್ಲಿದ್ದಾರೆ ಮತ್ತು ಆರೆಸ್ಸೆಸ್ ನ ಕಾರ್ಯ ಯೋಜನೆಗಳಿಗೆ ಅದೇ ಮಾದರಿಯಲ್ಲಿ ಎದುರೇಟು ನೀಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂದು ಆರೆಸ್ಸೆಸ್’ನ ಮತ್ತೊಬ್ಬ ಮುಖಂಡರು ಇದೇ ಮಾಧ್ಯಮಕ್ಕೆ ತಿಳಿಸಿದ್ದಾರೆ.