ಬೆಂಗಳೂರು: ಮುಂದಿನ ಹತ್ತು ವರ್ಷಗಳಲ್ಲಿ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಡಿಸೇಲ್-ಪೆಟ್ರೋಲ್ ಇಂಜಿನ್ ಸಂಪೂರ್ಣ ನಿಷೇಧಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಬಹುತೇಕ ಕಡೆ ಡಿಸೇಲ್ ಇಂಜಿನ್ ಬಂದ್ ಆಗಿದೆ. ಆದರೆ, ವರದಿ ಅನ್ವಯ ಡಿಸೇಲ್, ಪೆಟ್ರೋಲ್ ಗಳು ಹತ್ತು ವರ್ಷದೊಳಗೆ ಬಂದ್ ಆಗಲಿವೆ. ಡಿಸೇಲ್, ಪೆಟ್ರೋಲ್ ತೈಲದ ಬಳಿಕ ಇಲ್ಲಿಯೇ ಸ್ಥಳೀಯವಾಗಿ ತೆಗೆದ ಎಥನಾಲ್ ಬಳಕೆ ಮಾಡುವ ಇಂಜಿನ್’ಗಳು ಕಾರ್ಯರೂಪಕ್ಕೆ ಬರಲಿವೆ. ಪ್ರಸ್ತುತ ಶೇ.20 ರಷ್ಟು ಎಥನಾಲ್ ಬಳಕೆ ಆಗುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ಇದರ ಬಳಕೆ ಪ್ರಮಾಣ ದ್ವಿಗುಣ ಆಗಲಿದೆ ಎಂದರು.
ನಮ್ಮ ಸಂಪನ್ಮೂಲವನ್ನು ಬಳಸಿಕೊಂಡು ಹೊರರಾಜ್ಯದ ಉದ್ಯಮಿಗಳು ಆರ್ಥಿಕವಾಗಿ ಬಲಿಷ್ಠರಾಗುತ್ತಿದ್ದಾರೆ. ಮುಂದೆ, ನಮ್ಮವರೇ ಬಂದು ಹೂಡಿಕೆ ಮಾಡಿದರೆ ಖುಷಿಯಾಗುತ್ತದೆ. ಇನ್ನೂ, ಕೈಗಾರಿಕೆಗಳನ್ನು ಆರಂಭಿಸಲು ಶೇ. 50ರಷ್ಟು ಸಬ್ಸಿಡಿ ಸಿಗುತ್ತದೆ. ಬ್ಯಾಂಕ್’ಗಳು ಸಾಲ ನೀಡುತ್ತವೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಆತ್ಮ ನಿರ್ಭರ ಭಾರತ ಯೋಜನೆಗೆ ಅನುಗುಣವಾಗಿ ರಾಜ್ಯದ 2 ಮತ್ತು 3ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜಿಸುವುದರ ಜೊತೆಗೆ ಶೀಘ್ರದಲ್ಲೇ ರಾಜ್ಯ ಸರ್ಕಾರವು ಒಂದು ಜಿಲ್ಲೆ ಒಂದು ಉತ್ಪನ್ನ ನೀತಿಯನ್ನು ಜಾರಿಗೆ ತರಲಿದೆ ಎಂದು ತಿಳಿಸಿದರು.
ರಾಜ್ಯಾದ್ಯಂತ ಸಮತೋಲಿತ ಕೈಗಾರಿಕೀಕರಣವನ್ನು ಉತ್ತೇಜಿಸಿಸಲು ನಾವು ತೆಗೆದುಕೊಂಡಿರುವ ಮತ್ತೊಂದು ಪ್ರಮುಖ ನಿರ್ಧಾರವೆಂದರೆ ಉತ್ಪನ್ನ ನಿರ್ದಿಷ್ಟ ಕೈಗಾರಿಕಾ ಕ್ಲಸ್ಟರ್. ಈ ಯೋಜನೆ ಮೂಲಕ ಹಲವು ಕೈಗಾರಿಕಾ ಸಮೂಹಗಳನ್ನು ಗುರುತಿಸಲಾಗಿದ್ದು, ಪ್ರತಿ ಕ್ಲಸ್ಟರ್ಗೆ ಆಯಾ ಉತ್ಪನ್ನ ವಲಯಕ್ಕೆ ನಿರ್ದಿಷ್ಟವಾದ ವಿಶೇಷ ಪ್ರೊತ್ಸಾಹ ಮತ್ತು ರಿಯಾಯಿತಿಗಳನ್ನು ಘೋಷಿಸಲಾಗಿದೆ ಎಂದು ನಿರಾಣಿ ಮಾಹಿತಿ ನೀಡಿದರು.