ನವದೆಹಲಿ: ರಾಜ್ಯ ಸಭಾ ಸಂಸದ ಕಪಿಲ್ ಸಿಬಲ್ ಅವರು ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದ ಹಲವು ಗಲಭೆಗಳ ಪಟ್ಟಿ ಮಾಡಿ ಅದನ್ನು ಬಿಡುಗಡೆ ಮಾಡುವ ಮೂಲಕ ಗೃಹ ಮಂತ್ರಿ ಅಮಿತ್ ಶಾಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿ ಅಧಿಕಾರಾವಧಿಯಲ್ಲಿ ಗಲಭೆಯೇ ನಡೆದಿಲ್ಲ ಎನ್ನುವ ಈ ಅಮಿತ್ ಶಾ ಇನ್ನೊಬ್ಬ ಜುಮ್ಲಾ ಎಂದು ಕರೆದ ಕಪಿಲ್ ಸಿಬಲ್ ಅವರು ಕೇಂದ್ರದಲ್ಲಿ ಮಾತ್ರವಲ್ಲ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಹಲವಾರು ಗಲಭೆಗಳಾಗಿರುವುದನ್ನು ಎತ್ತಿ ಹೇಳಿದ್ದಾರೆ.
“ನಮ್ಮ ಅಧಿಕಾರದಡಿ ಗಲಭೆಯೇ ಇಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದ 40 ಕಡೆಯೂ ಬಿಜೆಪಿ ಗೆಲ್ಲಲಿ, ಗಲಭೆಕೋರರನ್ನು ತಲೆ ಕೆಳಗಾಗಿ ನೇತು ಹಾಕಲಾಗುವುದು” ಎಂದು ಬಿಹಾರದ ನವಾಡ ಜಿಲ್ಲೆಯಲ್ಲಿ ಮಾತನಾಡುತ್ತ ಅಮಿತ್ ಶಾ ಹೇಳಿದ್ದರು.
“ಎನ್ ಸಿಆರ್ ಬಿ ಮಾಹಿತಿಯಂತೆ 2014- 2020ರ ನಡುವೆ 5,425 ಗಲಭೆಗಳು ದೇಶದಲ್ಲಿ ನಡೆದಿವೆ. 2019ರಲ್ಲಿ 25 ಕೋಮು ಗಲಭೆಗಳು ನಡೆದಿದ್ದು, 9 ಉತ್ತರ ಪ್ರದೇಶದಲ್ಲಿ, 4 ಮಹಾರಾಷ್ಟ್ರದಲ್ಲಿ, 2 ಮಧ್ಯ ಪ್ರದೇಶದಲ್ಲಿ ನಡೆದಿವೆ. 2021ರಲ್ಲಿ ಹರಿಯಾಣ, ಗುಜರಾತ್, ಮಧ್ಯ ಪ್ರದೇಶಗಳಲ್ಲಿ ತುಂಬ ಕೋಮು ಗಲಭೆಗಳು ನಡೆದಿವೆ” ಎಂದು ಕಪಿಲ್ ಸಿಬಲ್ ಪಟ್ಟಿ ಮಾಡಿದ್ದಾರೆ.
ಮೊನ್ನೆ ರಾಮ ನವಮಿಯಂದು ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ನಡೆದಿರುವ ಗಲಭೆಗಳನ್ನು ಪ್ರಸ್ತಾಪಿದ ಸಿಬಲ್ ಅವರು ಪ್ರಧಾನಿ ಇದಕ್ಕೆಲ್ಲ ಬಾಯಿ ಬಿಡುತ್ತಿಲ್ಲ, ಕಾರಣವೇನು, 2024ರ ಚುನಾವಣೆಯೇ ಎಂದು ಅವರು ಕೇಳಿದರು.
ಬಿಹಾರದ ಸಸಾರಂನಲ್ಲಿ ರಾಮ ನವಮಿಯಂದು ಆರಂಭವಾದ ಕೋಮು ಗಲಭೆ ಈಗಲೂ ಆರಿಲ್ಲ.