ಬೆಂಗಳೂರು: ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ . ಈ ಕುರಿತು ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿಗೂ ಸ್ಪಷ್ಟನೆ ನೀಡಿದ್ದೇನೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಯಾವನೋ ಒಬ್ಬ ಸಂತೋಷ್ ಎನ್ನುವವನು ಆತ್ಮಹತ್ಯೆ ಮಾಡಿಕೊಂಡರೆ ನಾನೇಕೆ ರಾಜೀನಾಮೆ ನೀಡಬೇಕು ಎಂದು ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಗುತ್ತಿಗೆದಾರ, ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ವಿರುದ್ಧ ನಾನು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಿಂದ ಹೆದರಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅವರು ಹೇಳಿದರು.
ನಮ್ಮ ಇಲಾಖೆಯಲ್ಲಿ ಯಾವುದೇ ಕಾಮಗಾರಿ ನಡೆಸಬೇಕಾದರೆ ಆಡಳಿತಾತ್ಮಕ, ತಾಂತ್ರಿಕ ಆದೇಶ, ವರ್ಕ್ ಆರ್ಡರ್ ಸೇರಿದಂತೆ ವಿವಿಧ ಪ್ರಕ್ರಿಯೆಗಳಿವೆ. ಇವು ಯಾವುದೂ ಇಲ್ಲದೆ ಕಾಮಗಾರಿ ನಡೆಸಲಾಗಿದೆ ಎಂದರೆ ಹೇಗೆ?. ಡೆತ್ ನೋಟ್ ಅನ್ನು ಸಂತೋಷ್ ಪಾಟೀಲ್ ಅವರೇ ಟೈಪ್ ಮಾಡಿದ್ದಾರಾ ಬೇರೆಯವರು ಟೈಪ್ ಮಾಡಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಕಾಮಗಾರಿ ಮಾಡಿದ್ದೇನೆ, ಬಾಯ್ಮಾತಿನಲ್ಲಿ ಆದೇಶ ನೀಡಿದ್ದರು, 80 ಬಾರಿ ಮನೆಗೆ ಹೋಗಿದ್ದೇನೆ, ನಾಲ್ಕು ಕೋಟಿ ರೂ.ಕೆಲಸ ಮಾಡಿದ್ದೇನೆ, ಈಶ್ವರಪ್ಪನವರ ಕಡೆಯವರು ಕಮಿಷನ್ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ. ಇವು ಯಾವುದಕ್ಕೂ ದಾಖಲೆಗಳಿಲ್ಲ.
ಸಂತೋಷ್ ಪಾಟೀಲ್ ಅವರನ್ನು ದೆಹಲಿಗೆ ಕಳುಹಿಸಿದವರು ಯಾರು, ಕೇಂದ್ರ ಸಚಿವರನ್ನು ಭೇಟಿ ಮಾಡಿಸಿದವರು ಯಾರು ಇವುಗಳ ಹಿಂದೆ ಷಡ್ಯಂತರವಿದೆ ಇದರ ಬಗ್ಗೆ ತನಿಖೆಯಾಗಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.
ಈಶ್ವರಪ್ಪನ ಕಡೆಯವರು ಕಮಿಷನ್ ಕೇಳಿದ್ದಾರೆ ಎಂದು ಸಂತೋಷ್ ಆರೋಪಿಸಿದ್ದ. ಆತನಿಗೆ ದೆಹಲಿ ಹೋಗಲು ಟಿಕೆಟ್ ಮಾಡಿಕೊಟ್ಟಿದ್ದು ಯಾರು? ನಮ್ಮ ಇಲಾಖೆ ಪ್ರಧಾನ ಕಾರ್ಯದರ್ಶಿ ಅತೀಕ್, ಕೇಂದ್ರ ಸಚಿವರಿಗೆ ಪತ್ರ ಬರೆದು ಸಂತೋಷ್ ಗೆ ವರ್ಕ್ ಆರ್ಡರ್ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ. ಟಿವಿ ವಾಹಿನಿ ಹಾಗೂ ಸಂತೋಷ್ ಪಾಟೀಲ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದೆ. ಕೋರ್ಟ್ ಅವರಿಬ್ಬರಿಗೂ ನೋಟಿಸ್ ನೀಡಿದೆ. ಸಂತೋಷ್ ನೋಟಿಸ್‌ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಕಾಂಗ್ರೆಸ್ ನವರದ್ದು ನಿರಾಧಾರ ಆರೋಪ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷರಿಗೆ ವಿಷಯ ತಿಳಿಸಿದ್ದೇನೆ. ಈ ಷಡ್ಯಂತ್ರದ ಹಿಂದೆ ಯಾರು ಇದ್ದಾರೆ ಎಂಬುದರ ಸಮಗ್ರ ತನಿಖೆಯಾಗಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.