ಬೆಂಗಳೂರು: ಸರ್ಕಾರದ ಬಳಿ ಬರ ಎದುರಿಸಲು, ಗ್ಯಾರಂಟಿ ಜಾರಿಗೆ ಹಣವಿಲ್ಲ. ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪಾವತಿಸಲೂ ಹಣ ಇಲ್ಲ. ಸರ್ಕಾರ ಒಂದು ರೀತಿಯಲ್ಲಿ ದಿವಾಳಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಇದ್ದಾಗ ಅಭಿವೃದ್ಧಿ ಹೊಂದಿದ ರಾಜ್ಯ ನಮ್ಮದಾಗಿತ್ತು. ಈ ಸರ್ಕಾರ ಬದುಕಿದ್ದೂ ಸತ್ತಂತೆ ಆಗಿದೆ. ಕುಂಟು ನೆಪ ಹೇಳಿಕೊಂಡು ಕಾಂಗ್ರೆಸ್ಸಿಗರು ಕಾಲಹರಣ ಮಾಡುತ್ತಿದ್ದಾರೆ. ಬಹಳ ಕಾಲ ಇವರನ್ನು ಹೀಗೇ ಬಿಡಲು ಆಗಲ್ಲ, ನಮ್ಮೆಲ್ಲಾ ಮುಖಂಡರೂ ಚರ್ಚೆ ಮಾಡಿ ಇದೆಲ್ಲದರ ವಿರುದ್ಧ ಹೋರಾಟ ಮಾಡಲು ಚಿಂತನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.