ಮಂಗಳೂರು: ಮನೆಯಲ್ಲಿ ಯಾರು ಇಲ್ಲದ ವೇಳೆ ವ್ಯಕ್ತಿಯೋರ್ವ ಕಳ್ಳತನ ನಡೆಸಿದ ಘಟನೆ ಮಂಗಳೂರಿನ ಕೆಳಗಿನ ತೋಕೂರಿನಲ್ಲಿ ನಡೆದಿದೆ. ಬಂಧಿತ ಆರೋಪಿಯು ಸಂತ್ರಸ್ತರ ನೆರೆಹೊರೆಯವನಾಗಿದ್ದು, ಸಂತ್ರಸ್ತರ ಮನೆಯಲ್ಲಿ ನಿಕಟ ಸಂಪರ್ಕ ಹೊಂದಿದ್ದ. ಮನೆಯ ಸದಸ್ಯರ ವಿಶ್ವಾಸಗಳಿಸಿ ಮನೆಯ ವಿಚಾರಗಳನ್ನು ತಿಳಿದುಕೊಂಡು ಮನೆಯವರು ಬೇರೆ ಊರಿಗೆ ತೆರಳುವ ವಿಷಯ ತಿಳಿದುಕೊಂಡ ಆರೋಪಿಯು ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಮನೆಯ ಹೆಂಚು ತೆಗೆದು ನಗ ನಗದು ಕಳವು ಮಾಡಿದ್ದಾನೆ.
ವಿಷಯ ತಿಳಿದು ಪ್ರಕರಣ ಭೇದಿಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯ ಹೆಡಿಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಯಿಂದ 248.600 ಗ್ರಾಂ ತೂಕದ ಚಿನ್ನಾಭರಣ, ನಗದು ಸಹಿತ 11,11,270 ರೂ. ಮೌಲ್ಯದ ಸೊತ್ತನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿ ಸಾಲಬಾಧೆಯಿಂದ ಕಳವು ನಡೆಸಿರುವುದಾಗಿ ಮಾಹಿತಿ ನೀಡಿದ್ದಾನೆ.
ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನಿರ್ದೇಶನದಂತೆ ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್‌ಕುಮಾರ್ ಬಾರಿಕೆ, ಎಸಿಪಿ ಎಸ್.ಮಹೇಶ್‌ಕುಮಾರ್ ನೇತೃತ್ವದ ಕಾರ್ಯಾಚರಣೆಯಲ್ಲಿ ಪಣಂಬೂರು ಠಾಣಾ ಇನ್‌ಸ್ಪೆಕ್ಟರ್ ಅಝಮತ್ ಅಲಿ, ಪಿಎಸ್‌ಐಗಳಾದ ಉಮೇಶ್ ಕುಮಾರ್ ಎಂ.ಎನ್, ಕುಮಾರೇಶನ್, ಪ್ರೊಬೇಷನರಿ ಪಿಎಸ್‌ಐ ಮನೋಹರ್ ಪ್ರಸಾದ್, ಎಎಸ್‌ಐ ಕೃಷ್ಣ, ಸಿಬ್ಬಂದಿಯಾದ ಡೇವಿಡ್ ಡಿಸೋಜ, ಕಮಲಾಕ್ಷ, ಚಂದ್ರಹಾಸ್ ಆಳ್ವ, ದಾದಾಸಾಬ್ ಭಾಗವಹಿಸಿದ್ದರು.