ತೀರ್ಥಹಳ್ಳಿ: ವಿವಾಹದ ಕಾರ್ಯಕ್ರಮಕ್ಕೆ ಆಗಮಿಸಿದ ಶೂದ್ರ ವ್ಯಕ್ತಿಯೊಬ್ಬರು ಬ್ರಾಹ್ಮಣರ ಊಟದ ಪಂಕ್ತಿಯಲ್ಲಿ ಕುಳಿತಿರುವುದನ್ನು ಕಂಡು ಕೋಪಗೊಂಡ ಬ್ರಾಹ್ಮಣರು, ಅವರನ್ನು ಬೈದು ನಿಂದಿಸಿ ಹೊರ ಹಾಕಿದ ಘಟನೆ ನಗರದ ರಥಬೀದಿಯ ರಾಮಚಂದ್ರಾಪುರ ಮಠದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಮದುವೆಯ ಆಮಂತ್ರಣದ ಮೇರೆಗೆ ಆಗಮಿಸಿದ ಮಿಲ್ ಕೇರಿ ನಿವಾಸಿ ನಾಗರಾಜ್ ಎಂಬವರು ಬ್ರಾಹ್ಮಣರ ಸಾಲಿನಲ್ಲಿ ಊಟಕ್ಕೆ ಕುಳಿತಿದ್ದರು. ಇದನ್ನು ಕಂಡು ಕೆರಳಿದ ಬ್ರಾಹ್ಮಣರು ಆ ವ್ಯಕ್ತಿಯನ್ನುದ್ದೇಶಿಸಿ, ನೀವು ಇಲ್ಲಿ ಊಟಕ್ಕೆ ಕುಳಿತುಕೊಳ್ಳಬಾರದು,ಎದ್ದೇಳಿ ಎಂದು ಹತ್ತಾರು ಜನರ ಎದುರಿಸಿ ಗದರಿಸಿ ಅಲ್ಲಿಂದ ಜಾತಿ ನಿಂದನೆಗೈದು ಹೊರ ಹಾಕಿ ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯ ಕುರಿತು ಮಾಧ್ಯಮದೊಂದಿದೆ ಮಾತನಾಡಿದ ಸಂತ್ರಸ್ತ ನಾಗರಾಜ್ ಅವರು, ಮದುವೆ ಕಾರ್ಯಕ್ರಮದ ಪ್ರಯುಕ್ತ ತೀರ್ಥಹಳ್ಳಿಯ ರಾಮಚಂದ್ರಾಪುರ ಮಠದಲ್ಲಿ ಬ್ರಾಹ್ಮಣದ ಸಾಲಿನಲ್ಲಿ ಊಟಕ್ಕೆ ಕುಳಿತದ್ದನ್ನೇ ನೆಪವಾಗಿಟ್ಟು ನನ್ನನ್ನು ಬೈದು ಹಲವರ ಎದುರಲ್ಲಿ ಅವಮಾನಿಸಿದ್ದಾರೆ ಎಂದು ತಮ್ಮ ನೋವನ್ನು ಪತ್ರಕರ್ತರೊಂದಿಗೆ ತೋಡಿಕೊಂಡಿದ್ದಾರೆ.