ಬೆಳಗಾವಿ: ಮದುವೆಯಾಗಿ ಒಂದು ತಿಂಗಳಿಗೆ ಓಡಿ ಹೋಗಿ, ನಂತರ ವಿಚ್ಚೇದನ ಪಡೆದು ಪ್ರಿಯಕರನ್ನು ಮದುವೆಯಾಗಿದ್ದ ಮಾಜಿ ಹೆಂಡತಿ ಮತ್ತು ಆಕೆಯ ಗಂಡನನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಯಾಸೀನ್ ಬಾಗೊಡೆ (21) ಹಾಗೂ ಹೀನಾ ಕೌಸರ್ (19) ಕೊಲೆಯಾದವರು. ತೌಫಿಕ್ ಕ್ಯಾಡಿ (24) ಕೊಲೆ ಮಾಡಿದ ಆರೋಪಿ.
ಇಬ್ಬರ ಮೇಲೆ ಹಲ್ಲೆ ಮಾಡುವ ವೇಳೆ ಬಿಡಿಸಲು ಬಂದಿದ್ದ ತಾಯಿ ಆಮಿನಾಬಾಯಿ ಬಾಗೂಡ ಹಾಗೂ ಮಾವ ಮುಸ್ತಫಾ ಮುಲ್ಲಾ ಮೇಲೂ ತೌಫೀಕ್ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಮದುವೆಯಾಗಿ ಕೇವಲ 1 ತಿಂಗಳಿಗೆ ಹೆಂಡತಿ ಹೀನಾ ಕೌಸರ್ ಆಕೆಯ ಹಳೆ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಅವರನ್ನು ಮನೆಯವರು ಹುಡುಕಿ ಸಮಾಜದ ಮುಖಂಡರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಿದ್ದರು. ಈ ವೇಳೆ ತಾನು ತೌಫಿಕ್ ಜೊತೆಗೆ ಸಂಸಾರ ಮಾಡುವುದಕ್ಕೆ ಇಷ್ಟವಿಲ್ಲ, ಯಾಸೀನ್ನೇ ಬೇಕು ಎಂದು ಹೀನಾ ಹಠ ಮಾಡಿದ್ದಾಳೆ. ಆಗ ಗ್ರಾಮಸ್ಥರೆಲ್ಲರೂ ಸೇರಿ ತೌಫಿಕ್ ಜೊತೆಗಿನ ವಿವಾಹವನ್ನು ಮುರಿದು ಯಾಸಿನ್ ಬಾಗೊಡೆ ಜೊತೆಗೆ ಹಿರಿಯರೆಲ್ಲರು ಸೇರಿ ಮದುವೆ ಮಾಡಿಸಿದ್ದರು.
ಡಬಲ್ ಮರ್ಡರ್ ಮಾಡಿ ಸ್ಥಳದಿಂದ ಪರಾರಿ ಆಗಿದ್ದಾನೆ. ಮರ್ಡರ್ ನಡೆದ ಸ್ಥಳಕ್ಕೆ ಐಗಳಿ ಠಾಣೆ ಪೊಲೀಸರು ಬಂದು ಪರಿಶೀಲನೆ ಮಾಡಿದ್ದಾರೆ. ಆರೋಪಿಯ ಪತ್ತೆಗಾಗಿ ಪೊಲೀಸರು ಎರಡೂ ತಂಡಗಳಾಗಿ ಶೋಧ ಕಾರ್ಯವನ್ನು ಆರಂಭಿಸಿದ್ದಾರೆ.