ಭುವನೇಶ್ವರ್: ಒಡಿಶಾದ ಪುರಿ ಜಿಲ್ಲೆಯ ಗ್ರಾಮವೊಂದರಲ್ಲಿ ವಿಚಿತ್ರವಾದ ಸಮಸ್ಯೆ ಎದುರಾಗಿದ್ದು, ವಿಷಪೂರಿತ ಇರುವೆಗಳು ದಾಳಿ ಮಾಡಲಾರಂಭಿಸಿದೆ. ಇದರಿಂದಾಗಿ ಬಹುತೇಕ ಗ್ರಾಮಸ್ಥರು ಊರು ತೊರೆಯುತ್ತಿದ್ದಾರೆ ಎನನಲಾಗುತ್ತಿದೆ. ಜಿಲ್ಲಾ ಆಡಳಿತ ಹಾಗೂ ಒಡಿಶಾದ ಕೃಷಿ ಹಾಗೂ ತಂತ್ರಜ್ಞಾನ ವಿವಿಯ ವಿಜ್ಞಾನಿಗಳು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ಬ್ರಹ್ಮನ್ಸಾಹಿ ಗ್ರಾಮದಲ್ಲಿ ಈ ವಿಚಿತ್ರ ಸಮಸ್ಯೆ ಎದುರಾಗಿದೆ. ಲಕ್ಷಾಂತರ ಕೆಂಪು ಹಾಗೂ ಫೈರ್ ಆಂಟ್ ಎಂದು ಕರೆಸಿಕೊಳ್ಳುವ ಇರುವೆಗಳು ಗ್ರಾಮದಲ್ಲಿ ಕಾಣಿಸಿಕೊಂಡಿವೆ.
ಮನೆಗಳು, ರಸ್ತೆ, ಕೃಷಿ ಭೂಮಿ, ಮರ ಹೀಗೆ ಎಲ್ಲೆಂದರಲ್ಲಿ ಇರುವೆಗಳ ಹಿಂಡು ಕಾಣಲಾರಂಭಿಸಿವೆ. ಹಲವರಿಗೆ ಈ ಇರುವೆಗಳು ಕಚ್ಚಿದ್ದು, ಊತ, ಚರ್ಮದ ಕಿರಿಕಿರಿ ಉಂಟಾಗಿದೆ. ಸಾಕು ಪ್ರಾಣಿಗಳ ಮೇಲೆಯೂ ಇರುವೆಗಳು ದಾಳಿ ಮಾಡಿವೆ.
ಇರುವೆ ಕಾಟ ತಡೆಯಲಾರದೇ ಗ್ರಾಮದಲ್ಲಿರುವ ಹಲವರು ಗ್ರಾಮವನ್ನು ತೊರೆಯುತ್ತಿದ್ದಾರೆ. ಕೆಲವರು ಕೀಟನಾಶಕ ಪುಡಿಗಳನ್ನು ವೃತ್ತಾಕಾರದಲ್ಲಿ ಸಿಂಪಡಿಸಿ ಇರುವೆಗಳಿಂದ ರಕ್ಷಣೆ ಪಡೆಯುತ್ತಿದ್ದಾರೆ.
ಪ್ರವಾಹದ ಕಾರಣ ಸಮಸ್ಯೆ ಎಂದು ಅಂದಾಜಿಸಲಾಗಿದೆ. ಆದರೆ ಈ ಹಿಂದೆಯೂ ಗ್ರಾಮದಲ್ಲಿ ಪ್ರವಾಹ ಸ್ಥಿತಿ ಉಂಟಾಗಿತ್ತು. ಆದರೆ ಎಂದೂ ಸಮಸ್ಯೆ ಎದುರಾಗಿರಲಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.