ಚಾಮರಾಜನಗರ: ದಲಿತ ಮಹಿಳೆ ನೀರು ಕುಡಿದಳೆಂದು ಟ್ಯಾಂಕ್‌ ಖಾಲಿ ಮಾಡಿ ಗೋಮೂತ್ರದಿಂದ ತೊಳೆದ ಗ್ರಾಮಸ್ಥರು!

Prasthutha|

ಚಾಮರಾಜನಗರ: ದಲಿತ ಮಹಿಳೆ ನೀರು ಕುಡಿದಳೆಂದು ಟ್ಯಾಂಕ್‌ ಖಾಲಿ ಮಾಡಿ ಗೋಮೂತ್ರದಿಂದ ತೊಳೆದ ಘಟನೆ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ನಡೆದಿದೆ.

- Advertisement -

ದಲಿತ ಮಹಿಳೆಯೊಬ್ಬರು ಕಿರು ನೀರು ಸರಬರಾಜು ಟ್ಯಾಂಕ್‌ ನಲ್ಲಿಯಲ್ಲಿ ನೀರು ಕುಡಿದರೆಂಬ ಕಾರಣಕ್ಕೆ ಅದರಲ್ಲಿದ್ದ ನೀರೆಲ್ಲವನ್ನೂ ಹೊರಕ್ಕೆ ಹರಿಸಿ, ಗೋಮೂತ್ರದಿಂದ ಶುದ್ಧೀಕರಿಸಲಾಗಿದೆ. ಎಲ್ಲ ನಲ್ಲಿಗಳಿಂದಲೂ ನೀರನ್ನು ಹರಿಸುತ್ತಿರುವ ವಿಡಿಯೋವೊಂದು ವೈರಲಾಗಿದೆ.

ಘಟನೆಯು ತಾಲ್ಲೂಕು ಆಡಳಿತದ ಗಮನಕ್ಕೆ ಬಂದಿದ್ದು, ಸ್ಥಳೀಯ ಕಂದಾಯ ನಿರೀಕ್ಷಕ ಸೇರಿದಂತೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ತಹಶೀಲ್ದಾರ್‌ಗೆ ವರದಿ ನೀಡಿದ್ದಾರೆ.

- Advertisement -

‘ಪರಿಶಿಷ್ಟ ಜಾತಿಗೆ ಸೇರಿದ ಯುವಕನೊಬ್ಬನ ಮದುವೆಯಲ್ಲಿ ಪಾಲ್ಗೊಂಡ ನಲ್ಲಿಯಲ್ಲಿ ನೀರು ಕುಡಿದಿದ್ದಾರೆ. ಅದೇ ಬೀದಿಯವರು ಯಾರೋ ಇದನ್ನು ನೋಡಿದ್ದಾರೆ. ಮಹಿಳೆ ದಲಿತ ಸಮುದಾಯದವಳು ಎಂದು ಗೊತ್ತಾಗುತ್ತಿದ್ದಂತೆ ಆಕೆಗೆ ಬೈದಿದ್ದಾರೆ. ನಂತರ ಎಲ್ಲ ನಲ್ಲಿಯನ್ನು ತೆರೆದು ನೀರು ಖಾಲಿ ಮಾಡಿ ಗೋಮೂತ್ರದಿಂದ  ಸ್ವಚ್ಛಗೊಳಿಸಿದ್ದಾರೆ’ ಎಂದು ಗ್ರಾಮಸ್ಥರೊಬ್ಬರು ಹೇಳಿರುವುದಾಗಿ ವರದಿಯಾಗಿದೆ.

 ‘ಈ ಬಗ್ಗೆ ಮಾಹಿತಿ ಬಂದಿದೆ. ಶನಿವಾರ ಕಂದಾಯ ನಿರೀಕ್ಷಕರನ್ನು ಕಳುಹಿಸಿ ವರದಿ ಪಡೆದಿದ್ದೇನೆ. ಅದರ ಆಧಾರದಲ್ಲಿ, ಗ್ರಾಮಕ್ಕೆ ತೆರಳಿ ಸ್ಥಳೀಯರನ್ನು ವಿಚಾರಿಸಿ ಸಂಪೂರ್ಣ ಮಾಹಿತಿ ಕಲೆ ಹಾಕಿ ಸಮಗ್ರ ವರದಿ ನೀಡಲು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸುತ್ತೇನೆ. ಗ್ರಾಮದಲ್ಲಿ ಎಲ್ಲ ಸಮುದಾಯದವರ ಸಭೆ ನಡೆಸಿ, ಘಟನೆ ನಡೆದಿರುವುದು ನಿಜವೇ ಆಗಿದ್ದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚಾಮರಾಜನಗರ ತಾಲೂಕು ತಹಶೀಲ್ದಾರ್‌ ಐ.ಇ.ಬಸವರಾಜು ತಿಳಿಸಿದ್ದಾರೆ.

Join Whatsapp