ನನ್ನ ಮಗನ ಕೊಲೆಯ ಹಿಂದಿನ ಕಾಣದ ಕೈಗಳು ಹೊರಬರಬೇಕು: ಫಾಝಿಲ್ ತಂದೆಯ ಆಗ್ರಹ

Prasthutha|

► ಪೊಲೀಸರ ತನಿಖೆ ಮೇಲೆ ರಾಜಕಾರಣಿಗಳ ಒತ್ತಡ ಇದೆ ಎಂದು ಆರೋಪ

- Advertisement -

ಮಂಗಳೂರು: ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಕೊಲೆ ಪ್ರಕರಣದ ತನಿಖೆ ಮೇಲೆ ರಾಜಕಾರಣಿಗಳ ಒತ್ತಡ ಇರುವುದರಿಂದ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಕೊಲೆಯಾದ ಫಾಝಿಲ್ ತಂದೆ ಫಾರೂಕ್ ಆರೋಪಿಸಿದ್ದಾರೆ.

ತನಿಖೆ ನಡೆಸುತ್ತಿರುವ ಪೊಲೀಸರು ಪ್ರಾಮಾಣಿಕರಾಗಿದ್ದರೂ ತನಿಖೆಯನ್ನು ಮುಂದಕ್ಕೆ ಹೋಗಲು ರಾಜಕಾರಣಿಗಳು ಬಿಡುತ್ತಿಲ್ಲ, ಈ ಕೊಲೆಯ ಹಿಂದೆ ಇರುವ ಕಾಣದ ಕೈಗಳ ಬಗ್ಗೆ ನಾವು ಮಾಹಿತಿ ನೀಡಿದರೂ ಅವರನ್ನು ಬಂಧನ ಮಾಡುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

- Advertisement -

ಸುರತ್ಕಲ್ ಮುಸ್ಲಿಂ ಐಕ್ಯತಾ ವೇದಿಕೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರು ಕೇವಲ ಸಿಸಿಟಿವಿಯಲ್ಲಿ ಸೆರೆಯಾದ ಆರೋಪಿಗಳನ್ನು ಮಾತ್ರ ಬಂಧಿಸಿದ್ದು, ಅದಕ್ಕಿಂತ ಮುಂದೆ ಹೋಗುತ್ತಿಲ್ಲ. ಕೃತ್ಯದ ಹಿಂದಿನ ಸೂತ್ರಧಾರರು ಯಾರು? ಕೊಲೆಯ ಹಿಂದೆ ಯಾರಿದ್ದಾರೆ? ಎಂದು ಪೊಲೀಸರು ತಿಳಿಸಿಲ್ಲ. ಜೈಲಿನಲ್ಲಿ ಆರೋಪಿಗಳ ಗುರುತು ಪರಿಚಯ ಮಾಡುವಾಗ ಮುಖ್ಯ ಸಾಕ್ಷಿಯನ್ನೇ ಕರೆದಿಲ್ಲ ಎಂದು ಅವರು ಆರೋಪಿಸಿದರು.

ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿರುವ ಬಿ.ಸಿ ರೋಡ್ ಮೂಲದ ವ್ಯಕ್ತಿಯನ್ನೇ ಪ್ರಮುಖ ಸೂತ್ರಧಾರ ಎಂದು ಹೇಳುತ್ತಿದ್ದಾರೆ. ಆದರೆ ಆತನ ಮನೆಯಲ್ಲಿ ಗತಿಯಿಲ್ಲ, ಅವನಿಗೆ ಚಾ ಕುಡಿಯಲು ಬೇರೆಯವರು ಸಹಾಯ ಮಾಡಬೇಕು, ಹೀಗಿರುವಾಗ ಆತ ಪ್ರಮುಖ ಸೂತ್ರಧಾರನಾಗಲು ಹೇಗೆ ಸಾಧ್ಯ? ಮಂಗಳಪೇಟೆಯ ಫಾಝಿಲ್ ಗೂ ಬಿ.ಸಿ ರೋಡಿನ ಆರೋಪಿಗೂ ಏನ್ ಸಂಬಂಧ ಇದೆ? ಎಂದು ಅವರು ಪ್ರಶ್ನಿಸಿದರು

27 ವರ್ಷ ಹಳೆಯದಾದ ಸಣ್ಣ ಕಾರಿನಲ್ಲಿ 7 ಮಂದಿ ಆರೋಪಿಗಳು ಇನಾದಿಂದ ಬಿ.ಸಿ ರೋಡ್ ತನಕ ಪ್ರಯಾಣಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಆ ಕಾರಿನ ಮಾಲೀಕ ಯಾರು ಎಂದು ಪೊಲೀಸರು ತೋರಿಸಿಲ್ಲ, ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದ ಮೂರು ವಾಹನಗಳ ಮಾಲೀಕರು ಯಾರೂ ಎಂಬುದನ್ನು ಬಹಿರಂಗಪಡಿಸಿಲ್ಲ, ಆಯುಧಗಳನ್ನು ಪೂರೈಸಿದ್ದು ಯಾರು ಎಂದು ತಿಳಸಿಲ್ಲ, ಕೇವಲ ಸಿಸಿಟಿವಿ ಫೂಟೇಜ್ ಹಿಡಿದು ನಾಮಕಾವಸ್ತೆಗೆ ಪ್ರಕರಣವನ್ನು ಮುಗಿಸಿರುವ ಥರ ಕಾಣುತ್ತಿದೆ ಎಂದು ಅವರು ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

ಫಾಝಿಲ್ ಕೊಲೆಯ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ನಮ್ಮಲ್ಲೂ ಕೆಲವು ದಾಖಲೆಗಳಿವೆ. ಪೊಲೀಸರು ಕೇಳಿದರೆ ಆ ದಾಖಲೆಗಳನ್ನು ನೀಡಲು ಸಿದ್ಧರಿದ್ದೇವೆ, ಫಾಝಿಲ್ ಕೊಲೆಯ ಹಿಂದೆ ಇರುವ ಕಾಣದ ಕೈಗಳನ್ನು ಪೊಲೀಸರು ಹೊರತರಬೇಕು ಎಂದು ಅವರು ಆಗ್ರಹಿಸಿದರು.

ಮಗನನ್ನು ಕಳೆದುಕೊಂಡಿರುವ ನನ್ನ ನೋವು ಬೇರೆ ಯಾರಿಗೂ ಬರಬಾರದು ಎಂದು ಕಣ್ಣೀರಿಟ್ಟ ಅವರು, ಇವರನ್ನು ಬಿಟ್ಟರೆ ಬೇರೆಯವರ ಮಕ್ಕಳನ್ನೂ ಇವರು ಕೊಲೆ ಮಾಡುತ್ತಾರೆ, ಇನ್ಮುಂದೆ ಯಾರ ಮಕ್ಕಳು ಸಾಯಬಾರದು ಎಂದು ಹೇಳಿದರು.

ಜುಲೈ 28ರಂದು ಸುರತ್ಕಲ್ ನಲ್ಲಿ ಫಾಝಿಲ್ ಹತ್ಯೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Join Whatsapp