ರಷ್ಯಾ ವಿರುದ್ಧ ಸಿಡಿದೆದ್ದ ಅಮೆರಿಕ; ಎಚ್ಚರಿಕೆ ನೀಡಿದ ಬೈಡನ್

Prasthutha|

ವಾಷಿಂಗ್ಟನ್: ರಷ್ಯಾ ವಿರುದ್ಧ ಸರಣಿ ನಿರ್ಬಂಧಗಳನ್ನು ಘೋಷಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾದಿ ಮಿರ್ ಪುಟಿನ್ ಆಕ್ರಮಣಕಾರಿ ವರ್ತನೆ ತೋರುತ್ತಿದ್ದಾರೆ ಎಂದು ದೂಷಿಸಿದ್ದಾರೆ.

- Advertisement -

ರಷ್ಯಾ ವಿರುದ್ಧ ಅಮೆರಿಕದ ಮೊದಲ ಆರ್ಥಿಕ ನಿರ್ಬಂಧಗಳನ್ನು ಘೋಷಿಸಿ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೈಡನ್ ‘ರಷ್ಯಾ ಆಕ್ರಮಣಕಾರಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ .ಆದ್ದರಿಂದ  ನಾವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ನಮಗೆ ಸ್ಪಷ್ಟ ಅರಿವಿದೆ. ‘ಪುಟಿನ್ ಈ ಪ್ರದೇಶಗಳಲ್ಲಿ ರಷ್ಯಾದ ಪಡೆಗಳನ್ನು ನಿಯೋಜಿಸಿದ್ದಾರೆ. ನನ್ನ ದೃಷ್ಟಿಯಲ್ಲಿ ಅವರು ಬಲವಂತವಾಗಿ ಹೆಚ್ಚಿನ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನಾವು ಕಳೆದ ರಾತ್ರಿಯ ಅವರ ಭಾಷಣವನ್ನು ಕೇಳಿದರೆ, ಅವರು ಮತ್ತಷ್ಟು ಮುಂದುವರಿಯಲು ಪ್ರಯತ್ನಿಸುತ್ತಿದ್ದಾರೆ. ಇದು ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣದ ಆರಂಭ ಎಂಬುದು ಸ್ಪಷ್ಟ’ ಎಂದು ಹೇಳಿದರು.

ಪೂರ್ವ ಉಕ್ರೇನ್‌ನ ಎರಡು ಪ್ರದೇಶಗಳನ್ನು ಸ್ವತಂತ್ರವೆಂದು ಘೋಷಿಸಲು ಮುಂದಾಗಿದ್ದ ರಷ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬೈಡನ್, ನಿರ್ಬಂಧ ಹೇರುವ ಸೂಚನೆ ನೀಡಿದರು.

- Advertisement -

ಈ ನಿರ್ಬಂಧಗಳನ್ನು ಅಮೆರಿಕದ ಮಿತ್ರರಾಷ್ಟ್ರಗಳು ಮತ್ತು ಪಾಲುದಾರ ದೇಶಗಳೊಂದಿಗೆ ನಿಕಟವಾಗಿ ಸಂಯೋಜಿಸಲಾಗಿದೆ. ರಷ್ಯಾದಿಂದ ಆಕ್ರಮಣಕಾರಿ ವರ್ತನೆ ಉಲ್ಬಣಗೊಂಡರೆ ನಿರ್ಬಂಧಗಳನ್ನು ಹೆಚ್ಚಿಸುವುದನ್ನು ಮುಂದುವರಿಸುತ್ತೇವೆ. ನಾವು ರಷ್ಯಾದ ಎರಡು ದೊಡ್ಡ ಹಣಕಾಸು ಸಂಸ್ಥೆಗಳಾದ ವಿಇಬಿ ಮತ್ತು ಅವರ ಮಿಲಿಟರಿ ಬ್ಯಾಂಕ್‌ಗಳ ಮೇಲೆ ಪೂರ್ಣ ನಿರ್ಬಂಧಗಳನ್ನು ಜಾರಿಗೊಳಿಸುತ್ತಿದ್ದು, ರಷ್ಯಾದ ಸಾರ್ವಭೌಮ ಸಾಲದ ಮೇಲೆ ಸಮಗ್ರ ನಿರ್ಬಂಧಗಳನ್ನು ಹೇರುತ್ತಿದ್ದೇವೆ. ಈ ಕಾರಣದಿಂದ ಇನ್ನು ಮುಂದೆ ರಷ್ಯಾಗೆ ಪಾಶ್ಚಾತ್ಯ ದೇಶಗಳಿಂದ ಹಣಕಾಸು ನೆರವು ಸಿಗುವುದಿಲ್ಲ. ನಮ್ಮ ಮಾರುಕಟ್ಟೆಗಳಲ್ಲಿ ಅಥವಾ ಯುರೋಪಿಯನ್ ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡಲು ಸಾಧ್ಯವಿಲ್ಲ’ ಎಂದು ಎಂದು ಬೈಡನ್ ಹೇಳಿದರು.

 ‘ರಷ್ಯಾ ತನ್ನ ಮುಂದಿನ ನಡೆಯನ್ನು ಆಲೋಚಿಸುತ್ತಿರುವಂತೆ, ನಮ್ಮ ಮುಂದಿನ ನಡೆಯನ್ನು ನಾವು ಸಿದ್ಧಪಡಿಸಿದ್ದೇವೆ. ತನ್ನ ಆಕ್ರಮಣವನ್ನು ಮುಂದುವರಿಸಿದರೆ ರಷ್ಯಾವು ಹೆಚ್ಚುವರಿ ನಿರ್ಬಂಧಗಳನ್ನು ಒಳಗೊಂಡಂತೆ ಇನ್ನೂ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ ಎಂದು ಬೈಡನ್ ಎಚ್ಚರಿಕೆ ನೀಡಿದ್ದಾರೆ.

Join Whatsapp