ಬೆಂಗಳೂರು: ಕೋರೊನಾ ಸಮಯದಲ್ಲಿ ಆಕ್ಸಿಜನ್ ಇಲ್ಲದೆ ಜನ ಸತ್ತರು. ಚಿಕಿತ್ಸೆ ಸರಿಯಾಗಿ ಸಿಗದೆ ರಾಜ್ಯದಲ್ಲಿಯೇ 4 ಲಕ್ಷ ಜನ ಸತ್ತಿದ್ದಾರೆ. ವ್ಯಾಕ್ಸಿನ್ ತೆಗೆದುಕೊಂಡವರು ಸಾಯುವ ಕಾಲ ಬಂದಿದೆ.ಬಿಜೆಪಿ ಜನರ, ಬಡವರ ಭಾಗಕ್ಕೆ ಸತ್ತುಹೋಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಅಧಿಕೃತ ಜಾಲತಾಣ ಎಕ್ಸ್‌ನಲ್ಲಿ ಸರಣಿ ಟ್ವೀಟ್ ಮಾಡಿರುವ ಸಿಸಿಎಂ, ಬಿಜೆಪಿಯವರು ಈ ವ್ಯಾಕ್ಸಿನ್ ಕೊಟ್ಟ ಕಂಪನಿಯಿಂದಲೂ ಲಂಚ ಹೊಡೆದಿದ್ದಾರೆ ಎಂದಿದ್ದಾರೆ.
ಕೊರೋನಾ ಲಸಿಕೆ ಹಾಕಿಸಿಕೊಂಡವರಿಗೆ ಮೋದಿ ಫೋಟೊ ಇರುವ ಪ್ರಮಾಣಪತ್ರ ಕೊಟ್ಟರು. ಸತ್ತವರ ಸರ್ಟಿಫಿಕೆಟ್ ಗೆ ಏಕೆ ಮೋದಿ ಫೋಟೋ ಹಾಕಿಲಿಲ್ಲ. ಜನರಿಗೆ ಸಹಾಯ ಮಾಡದೆ ದೀಪ ಹಚ್ಚಿ, ಚಪ್ಪಾಳೆ ಹೊಡೆಯಿರಿ ಎಂದರು. ಕೋರೋನಾ ಸಮಯದಲ್ಲಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಪ್ಯಾಕೇಜ್ ಪ್ರಕಟಿಸಿತು. ಆ ಹಣ ಯಾರಿಗಾದರೂ ಬಂದಿದೆಯೇ ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ.
ನಮ್ಮ ಕರಾವಳಿಯ ಕಾರ್ಪೋರೇಷನ್ ಬ್ಯಾಂಕ್, ವಿಜಯಾ ಬ್ಯಾಂಕ್ ಅನ್ನು ಬೇರೆ ಬ್ಯಾಂಕ್ ಗಳ ಜೊತೆ ವಿಲೀನ ಮಾಡಿ ಒಂದೂ ಬ್ಯಾಂಕ್ ಇಲ್ಲದಂತೆ ಮಾಡಿದ್ದು ಬಿಜೆಪಿಯ ಸಾಧನೆ ಎಂದಿದ್ದಾರೆ.
ಆಹಾರ ಭದ್ರತಾ ಕಾಯ್ದೆ, ಉಚಿತವಾಗಿ ಅಕ್ಕಿ ಕೊಡುವ ಯೋಜನೆ ತಂದಿದ್ದು ಕಾಂಗ್ರೆಸ್. ಹೆಣ್ಣುಮಕ್ಕಳಿಗೆ ಪದವಿಯ ತನಕ ಉಚಿತ ಶಿಕ್ಷಣ ಯೋಜನೆ ತಂದಿದ್ದು ಕಾಂಗ್ರೆಸ್. ನರೇಗಾ ಮೂಲಕ ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿ ಮಾಡಿದ್ದು ಕಾಂಗ್ರೆಸ್, ಬಿಜೆಪಿಯವರು ಬರಗಾಲದಲ್ಲಿ ನರೇಗಾ ಕೆಲಸ ಹೆಚ್ಚಳ ಮಾಡಿ ಎಂದರೂ ಮಾಡಲಿಲ್ಲ ಎಂದು ಬಿಜೆಪಿ ಸರಕಾರದ ವಿರುದ್ಧ ಡಿಕೆಶಿ ಕಿಡಿ ಕಾರಿದ್ದಾರೆ.