ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವ ಪ್ರೇಮಿಗಳ ಆತ್ಮಹತ್ಯೆಗೆ “ ಆ ಮೂರನೆಯವಳು” ಕಾರಣ !

Prasthutha|

ಚಿಕ್ಕಮಗಳೂರು: ಒಂದೇ ನೇಣಿನ ಕುಣಿಕೆಗೆ ಕೊರಳೊಡ್ಡಿ ಪ್ರೇಮಿಗಳ ಆತ್ಮಹತ್ಯೆಗೆ ಮೂರನೇಯವಳು ಕಾರಣ ಎನ್ನುವ ಸಂಗತಿ ಆಲ್ದೂರು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

- Advertisement -


ಘಟನೆಯ ಹಿನ್ನೆಲೆ;
ತಾಲೂಕಿನ ಮಲ್ಲಂದೂರು ಸಮೀಪದ ಕಲ್ಲುಗುಡ್ಡೆ ಗ್ರಾಮದ ದರ್ಶನ್ ಹಾಗೂ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾನ್’ಬಾಳು ಗ್ರಾಮದ ಪೂರ್ವಿಕಾ ಆಲ್ದೂರು ಸಮೀಪದ ಗುಲ್ಲನ್’ಪೇಟೆಯ ಸತ್ತಿಹಳ್ಳಿಯ ನಿರ್ಜನ ಪ್ರದೇಶದಲ್ಲಿ ನೇಣಿಗೆ ಕೊರಳೊಡ್ಡಿದ್ದರು.


ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರಿಗೆ ದರ್ಶನ್ ಹಾಗೂ ಪೂರ್ವಿಕಾ ಅವರ ಮದುವೆಗೆ ಮನೆಯವರು ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದರೆ ಆ ಸಂದರ್ಭದಲ್ಲಿ ದರ್ಶನ್ ಊರಿನದ್ದೇ ಯುವತಿಯೊಬ್ಬಳು, ದರ್ಶನ್’ನಿಂದ ನನಗೆ ಅನ್ಯಾಯವಾಗಿದೆ ಎಂದು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಈ ಹಿನ್ನೆಲೆಯಲ್ಲಿ ನೊಂದ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ.

- Advertisement -


ಮಂಗಳೂರಿಗೆ ಹೋಗಿ ಬರುತ್ತಿದ್ದ ದರ್ಶನ್’ಗೆ ಮಂಗಳೂರಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪೂರ್ವಿಕಾ ಪರಿಚಯವಾಗಿ ಬಳಿಕ ಅದು ಪ್ರೀತಿಗೆ ತಿರುಗಿತ್ತು. ವಿಷಯ ಪೂರ್ವಿಕಾ ಅವರ ಮನೆಯವರಿಗೆ ತಿಳಿದು 5 ವರ್ಷಗಳ ಬಳಿಕ ನಿಮಗೆ ಮದುವೆ ಮಾಡುತ್ತೇವೆ ಎಂದಿದ್ದರು. ಆದರೆ, ಒಂದು ತಿಂಗಳ ಹಿಂದೆ ದರ್ಶನ್ ವಿರುದ್ಧ ತಾಲೂಕಿನ ಮಲ್ಲಂದೂರು ಠಾಣೆಯಲ್ಲಿ ಹುಡುಗಿಯೊಬ್ಬಳು, ನಾನು ಗರ್ಭಿಣಿ ಇದ್ದೇನೆ. ಈಗ ಮದುವೆ ಆಗಲು ದರ್ಶನ್ ಒಪ್ಪುತ್ತಿಲ್ಲ. ನನಗೆ ನ್ಯಾಯ ಕೊಡಿಸಿ ಎಂದು ದೂರು ನೀಡಿದ್ದಳು.
ಈ ಪ್ರಕರಣ ಪ್ರೇಮಿಗಳ ಮಧ್ಯೆ ಬಿರುಕು ಮೂಡಲು ಕಾರಣವಾಗಿತ್ತು. 6 ವರ್ಷಗಳಿಂದ ಪೂರ್ವಿಕಾಳನ್ನು ಪ್ರೀತಿಸುತ್ತಿದ್ದ ದರ್ಶನ್ ಪೇಚಿಗೆ ಸಿಲುಕಿ ಇದೀಗ, ದೂರು ಕೊಟ್ಟ ಯುವತಿಯನ್ನು ಮದುವೆಯಾಗಲೇಬೇಕಾದ ಅನಿವಾರ್ಯತೆ ಎದುರಾಗಿತ್ತು.


ಈ ವಿಚಾರ ಗೊತ್ತಾಗುತ್ತಿದ್ದಂತೆ ಪೂರ್ವಿಕಾ ಆಕ್ರೋಶಗೊಂಡಿದ್ದು, ದರ್ಶನ್ ವಿರುದ್ಧ ಕೋಪಗೊಂಡಿದ್ದಳು. ಪೂರ್ವಿಕಾಳನ್ನು ಎಲ್ಲಾ ರೀತಿಯಲ್ಲೂ ಮನವೊಲಿಸಲು ದರ್ಶನ್ ಪ್ರಯತ್ನಿಸಿದ್ದ. ಮಾತ್ರವಲ್ಲ ದೂರುಕೊಟ್ಟ ಯುವತಿ ಸುಳ್ಳು ಹೇಳುತ್ತಿದ್ದಾಳೆ, ಆಕೆ ಗರ್ಭವತಿಯಾಗಲು ನಾನು ಕಾರಣನಲ್ಲ. ಡಿಎನ್’ಎ ಪರೀಕ್ಷೆ ಬೇಕಾದರೂ ಮಾಡಿಸಲು ನಾನು ಸಿದ್ಧನಿದ್ದೇನೆ ಎಂದು ಬೇಡಿಕೊಂಡಿದ್ದ.


ಆದರೆ, 3 ದಿನಗಳ ಹಿಂದೆ ಮಂಗಳೂರಿನಿಂದ ಬಂದ ಪೂರ್ವಿಕಾ, ದರ್ಶನ್’ನನ್ನು ಭೇಟಿಯಾಗಿ ಮಾತನಾಡಿದ್ದಾಳೆ. ಆ ವೇಳೆ ಇಬ್ಬರ ನಡುವೆ ಏನಾಯ್ತೋ ಗೊತಿಲ್ಲ. ಏನು ಮಾತನಾಡಿಕೊಂಡರೋ ಅದೂ ಗೊತ್ತಿಲ್ಲ. ಆದರೆ, ಅಪ್ಪ-ಅಮ್ಮನಿಗೆ ಕ್ಷಮಿಸಿ, ಅವನನ್ನು ಬಿಟ್ಟು ಇರೋಕೆ ಆಗುತ್ತಿಲ್ಲ ಎಂದು ವಾಯ್ಸ್ ಮೆಸೇಜ್ ಕಳಿಸಿ ಪೂರ್ವಿಕಾ ತನ್ನ ಪ್ರೇಮಿ ಜೊತೆ ನೇಣಿಗೆ ಕೊರಳೊಡ್ಡಿದ್ದಾಳೆ.


ಬದುಕಿದ್ದರೆ ದೂರುಕೊಟ್ಟ ಯುವತಿಯನ್ನೇ ಮದುವೆ ಆಗಬೇಕು ಎಂಬ ಭಯವೋ ಅಥವಾ 6 ವರ್ಷಗಳ ಪ್ರೀತಿಗೆ ಮೋಸ ಮಾಡುವ ಅಳುಕೋ ಗೊತ್ತಿಲ್ಲ. ಇಬ್ಬರು ಒಂದೇ ಮರಕ್ಕೆ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಲ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Join Whatsapp